ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೃಹ ಸಚಿವಾಲಯದ ಗೌಪ್ಯ ಮಾಹಿತಿ ಸೋರಿಕೆ, ಅಧಿಕಾರಿ ಸೆರೆ
(Home ministry | Ravi Inder Singh | IAS officer | G K Pillai)
ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಸಂಬಂಧಪಟ್ಟಂತೆ ಕೆಲವು ದೂರವಾಣಿ ಕಂಪನಿಗಳಿಗೆ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ಐಎಎಸ್ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆಂತರಿಕ ಸುರಕ್ಷತಾ ವಿಭಾಗದಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಕೇಡರ್‌ನ 1994ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ರವಿ ಇಂದರ್ ಸಿಂಗ್ ಎಂಬಾತನೇ ಬಂಧಿತ ಆರೋಪಿ. ಕಳೆದ ಹಲವು ಸಮಯದಿಂದ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದ ಕಣ್ಗಾವಲಿನಲ್ಲಿದ್ದ ಸಿಂಗ್‌ನ ಮನೆ ಮತ್ತು ಕಚೇರಿಗೆ ದಾಳಿ ನಡೆಸಿ ಶೋಧ ನಡೆಸಿದ ನಂತರ ಸೋಮವಾರ ರಾತ್ರಿ ಬಂಧಿಸಲಾಗಿದೆ.
ಬಂಧಿತ ಸಿಂಗ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಅಧಿಕಾರ ದುರ್ಬಳಕೆ, ಆರ್ಥಿಕ ಲಾಭ ಮತ್ತು ಅಕ್ರಮ ಲಂಚ ಪಡೆದಿರುವ ಆರೋಪಗಳನ್ನು ಹೊರಿಸಲಾಗಿದೆ.
ನವೆಂಬರ್ 25ರಿಂದ ಹರ್ಯಾಣದಲ್ಲಿ ಜಾರಿಗೆ ಬರಲಿರುವ ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ (ಸೇವಾದಾರರನ್ನು ಬದಲಾಯಿಸಿದರೂ ಮೊಬೈಲ್ ನಂಬರ್ ಬದಲಾಗದೆ ಇರುವ ವ್ಯವಸ್ಥೆ) ಸಂಬಂಧಪಟ್ಟಂತೆ ಕೆಲವು ಖಾಸಗಿ ಮೊಬೈಲ್ ಸೇವಾದಾರ ಕಂಪನಿಗಳ ಜತೆ ಅಕ್ರಮವಾಗಿ ಕ್ರಿಮಿನಲ್ ಮಾಹಿತಿಗಳನ್ನು ಸಿಂಗ್ ಹಂಚಿಕೊಂಡಿದ್ದ ಎಂದು ಮೂಲಗಳು ಹೇಳಿವೆ.
ಆದರೂ ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆಯು ಯಾವುದೇ ಮಾಹಿತಿ ನೀಡುತ್ತಿಲ್ಲ. ತಾವು ಇದುವರೆಗೆ ಈ ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ವಿಶೇಷ ಆಯುಕ್ತ ಪಿ.ಎನ್. ಅಗರವಾಲ್ ವಾದಿಸುತ್ತಿದ್ದಾರೆ.
ಆದರೆ ಅದಕ್ಕೂ ಮೊದಲು ಮಾತನಾಡಿದ್ದ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ಸಿಂಗ್ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಿರುವುದು ಹೌದು. ಗೃಹ ಸಚಿವಾಲಯದ ಅಮೂಲ್ಯ ಮಾಹಿತಿಗಳನ್ನು ಬಿಟ್ಟು ಕೊಟ್ಟಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ಹೇಳಿದ್ದರು.
ಮೊಬೈಲ್ ನಂಬರ್ ಪೋರ್ಟೆಬಿಲಿಟಿಗಾಗಿ ಭದ್ರತಾ ಪರವಾನಗಿ ಸಂಬಂಧ ಕೆಲವು ವಾಣಿಜ್ಯ ಸಂಸ್ಥೆಗಳಿಗೆ ಸೂಕ್ಷ್ಮ ಮಾಹಿತಿಗಳನ್ನು ಸಿಂಗ್ ಅಕ್ರಮವಾಗಿ ನೀಡಿದ್ದ. ಈತನ ಮೇಲೆ ಕಳೆದೊಂದು ತಿಂಗಳಿಂದ ಹದ್ದಿನ ಕಣ್ಣಿಡಲಾಗಿತ್ತು. ಆರೋಪದ ಕುರಿತು ಸಾಕಷ್ಟು ಸುಳಿವುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
ಸಿಂಗ್ ನಿರ್ದೇಶಕನಾಗಿದ್ದ ಆಂತರಿಕ ಸುರಕ್ಷತಾ ವಿಭಾಗವು ಗೃಹ ಸಚಿವಾಲಯದ ಗರಿಷ್ಠ ಗೌಪ್ಯತಾ ವಿಭಾಗ. ಇದೇ ವಿಭಾಗವು ದೇಶದ ಸುರಕ್ಷತೆಗೆ ಸಂಬಂಧಪಟ್ಟ ಮಹತ್ವದ ಎಲ್ಲಾ ವಿಚಾರಗಳನ್ನು ನಿಭಾಯಿಸುತ್ತಿದೆ.