ಬಿತ್ತಿದ್ದನ್ನು ಕಟಾವು ಮಾಡುತ್ತಿದ್ದೇನೆ ಎಂದು ಮರುಗಿದ ಕಸಬ್!
ಮುಂಬೈ, ಮಂಗಳವಾರ, 23 ನವೆಂಬರ್ 2010( 16:20 IST )
ಆರ್ಥರ್ ರೋಡ್ ಜೈಲಿನಲ್ಲಿರುವ ಮುಂಬೈ ದಾಳಿಕೋರ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಮೀರ್ ಅಜ್ಮಲ್‌ನಲ್ಲಿ ಹೇಗಿದ್ದೀಯಾ ಎಂದು ಪ್ರಶ್ನಿಸಿದಾಗ ಬಂದ ಉತ್ತರವಿದು. ಅಂದು ಬಿತ್ತಿದ್ದನ್ನು ಇಂದು ಕಟಾವು ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಪ್ರಶ್ನೆ ಕೇಳಿದ್ದು ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ (ಬಿಜೆಪಿ) ಏಕನಾಥ ಖಾಡ್ಸೆ. ಕಸಬ್‌ನನ್ನು ಇಡಲಾಗಿರುವ ಜೈಲಿಗೆ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಅವರ ಜತೆ ಪ್ರತಿಪಕ್ಷದ ನಾಯಕ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ.
PTI
ಜೈಲಿನಲ್ಲಿರುವ ನಿನಗೆ ಹೇಗನ್ನಿಸುತ್ತಿದೆ ಎಂದು ವಿಪಕ್ಷದ ನಾಯಕರು ಕಸಬ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಹಿಂದಿಯಲ್ಲಿ (jaisa boya, waisa kata) 'ಬಿತ್ತಿದ್ದನ್ನು ಕಟಾವು ಮಾಡುತ್ತಿದ್ದೇನೆ' ಎಂದು ಆತ ಉತ್ತರಿಸಿದ. ಹಾಗಾಗಿ ನಾನು ಕೂಡ ಆತನ ಜತೆ ಮಾತನಾಡುವ ಗೋಜಿಗೆ ಹೋಗಲಿಲ್ಲ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.
ಜೈಲಿನ ಪರಿಸ್ಥಿತಿಯನ್ನು ವಿವರಿಸಿರುವ ಪಾಟೀಲ್, ಜೈಲು ಕೈದಿಗಳಿಂದ ತುಂಬಿ ಹೋಗಿದೆ; ಅಲ್ಲಿ 781 ಕೈದಿಗಳನ್ನು ಮಾತ್ರ ಇಡುವ ಸಾಮರ್ಥ್ಯವಿದೆ. ಆದರೆ 2,000ಕ್ಕೂ ಹೆಚ್ಚು ಕೈದಿಗಳನ್ನು ಅಲ್ಲಿಡಲಾಗಿದೆ. ಜೈಲು ಸಿಬ್ಬಂದಿಗಳ ಸಂಖ್ಯೆಯೂ ಕಡಿಮೆಯಿದೆ. ಈಗಿರುವ ಎರಡು ಪಟ್ಟು ಸಿಬ್ಬಂದಿಗಳ ಹೆಚ್ಚಳ ಅಗತ್ಯವಿದೆ. ಅಲ್ಲಿರುವ ಕೆಲವರನ್ನು ನೂತನ ತಾಲೋಜಾ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದರು.
ಕಸಬ್ ಸುಳ್ಳುಗಾರ, ಪಿತೂರಿದಾರ... ಹೀಗೆಂದು ಹೇಳಿರುವುದು ಸರಕಾರಿ ವಕೀಲ ಉಜ್ವಲ್ ನಿಕ್ಕಂ. ಕಸಬ್ ಮರಣ ದಂಡನೆಯನ್ನು ಖಚಿತಗೊಳಿಸುವ ವಿಚಾರಣೆ ನಡೆಯುತ್ತಿರುವ ಬಾಂಬೆ ಹೈಕೋರ್ಟಿನಲ್ಲಿ ನಿಕ್ಕಂ ಈ ರೀತಿಯಾಗಿ ವಾದಿಸುತ್ತಿದ್ದಾರೆ.
ಮುಂಬೈ ದಾಳಿಯ ಕುರಿತು ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಹೊಸ ಕಥೆಗಳನ್ನು ಕಟ್ಟಿ ಹೇಳುತ್ತಿದ್ದ ಕಸಬ್ ಓರ್ವ ಸುಳ್ಳುಗಾರ ಮತ್ತು ಪಿತೂರಿದಾರ. ಆತ ಎಂತಹುದೇ ಕಥೆ ಹೇಳಿದರೂ, ತಾನೇ ಹೆಣೆದ ಬಲೆಗೆ ಕೊನೆಗೆ ಬೀಳುತ್ತಿದ್ದ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು.