ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ವಿಮಾನದಲ್ಲಿ ಯಡಿಯೂರಪ್ಪ: ರಾಜಕೀಯ ತಂತ್ರವೇ?
(Prime Minister Manmohan Singh | Yaddyurappa | Karnataka CM | Puttaparti)
ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಪುಟ್ಟಪರ್ತಿಯಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಶೇಷ ವಿಮಾನದಲ್ಲಿ ಬಂದಿದ್ದರ ಹಿಂದೆ ರಾಜಕೀಯ ಸಿಗ್ನಲ್ ಏನಾದರೂ ಇತ್ತೇ? ಅಥವಾ ಸುಮ್ಮನೆ ಇದೊಂದು ಉಚಿತ ಪ್ರಯಾಣದ ಸಾಮಾನ್ಯ ಘಟನೆಯೇ? ಹೀಗೊಂದು ಚರ್ಚೆಗೆ ಹೊಸ ಹೊಸ ವ್ಯಾಖ್ಯಾನಗಳು ಅತ್ತಿತ್ತಲಿಂದ ಕೇಳಿಕೊಳ್ಳತೊಡಗಿವೆ.
ಸೋಮವಾರ ಇಬ್ಬರೂ ಒಂದಾದದ್ದು ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ. ಒಬ್ಬರು 2ಜಿ ಹಗರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಕೂಗಾಟ, ಗದ್ದಲದಿಂದ ಕೊಂಚ ಸುಧಾರಿಸಿಕೊಳ್ಳಲೆಂದು ಬಂದಿದ್ದರೆ, ಮತ್ತೊಬ್ಬರು ಸ್ವಜನಪಕ್ಷಪಾತದ ಭೂ ಹಗರಣಗಳ ಆರೋಪಗಳ ಸುಳಿಯಲು ಸಿಕ್ಕು ಕುರ್ಚಿಗೇ ಕುತ್ತು ತಂದುಕೊಂಡು, ಗದ್ದಲಗಳಿಂದ ದೂರವಾಗಿ ಒಂದಿಷ್ಟು ತಂಗಾಳಿ ಸವಿಯಲೆಂದು ಬಂದವರು. ಮನಮೋಹನ್ ಸಿಂಗ್ ಅವರು ಉನ್ನತ ಶಿಕ್ಷಣ ಸಂಸ್ಥೆಯ 29ನೇ ಪದವಿ ಪ್ರದಾನ ನೆರವೇರಿಸಿದರೆ, ಯಡಿಯೂರಪ್ಪ ಸತ್ಯ ಸಾಯಿ ಬಾಬಾ ಆಶೀರ್ವಾದ ಬೇಡಿದರು.
ಸಮಾರಂಭ ಮುಗಿದ ಬಳಿಕ, ಅದಾಗಲೇ ಹೈಕಮಾಂಡ್‌ನಿಂದ ನವದೆಹಲಿಗೆ ಬುಲಾವ್ ಪಡೆದಿದ್ದ ಯಡಿಯೂರಪ್ಪ, ನಾನು ಕೂಡ ನಿಮ್ಮೊಂದಿಗೆ ದೆಹಲಿಗೆ ಬರಲೇ ಎಂದು ಕೇಳಿಕೊಂಡರಂತೆ ಯಡಿಯೂರಪ್ಪ. ಇದಕ್ಕೆ, ವಿನಯಶೀಲ ಪ್ರಧಾನಿ ಒಪ್ಪಿದರು ಎನ್ನುತ್ತವೆ ಪ್ರಧಾನಿ ಕಾರ್ಯಾಲಯದ ಮೂಲಗಳು. ಪುಟ್ಟಪರ್ತಿಯಿಂದ ನೇರವಾಗಿ ವೈಷ್ಣೋದೇವಿಯ ದರ್ಶನಕ್ಕೆ ಹೋಗಲಿದ್ದರು ಯಡಿಯೂರಪ್ಪ. ಆದರೆ ಕೊನೆ ಕ್ಷಣದಲ್ಲಿ ತೀರ್ಮಾನ ಬದಲಿಸಿ, ಪ್ರಧಾನಿಯೊಂದಿಗೆ ದಿಲ್ಲಿಗೆ ಹೊರಟಿದ್ದರು.
ಒಂದು ವೇಳೆ ಪಕ್ಷವೇನಾದರೂ ತಮ್ಮನ್ನು ಮುಖ್ಯಮಂತ್ರಿ ಪಟ್ಟದಿಂದ ಬಲವಂತವಾಗಿ ಕೆಳಗಿಳಿಸಿದರೆ ಯಡಿಯೂರಪ್ಪ ಬೇರೆಯೇ ಏನಾದರೂ ರಾಜಕೀಯ ಪ್ಲ್ಯಾನ್‌ಗಳನ್ನು ಹೊಂದಿದ್ದರೇ? ಕಾಂಗ್ರೆಸ್ ನೇತಾರರಾಗಿರುವ ಪ್ರಧಾನಿ ಸಿಂಗ್ ಜೊತೆಗೆ ಆತ್ಮೀಯತೆಯೊಂದಿಗೆ ಬರುವ ಮೂಲಕ ಬಿಜೆಪಿ ಹೈಕಮಾಂಡ್‌ಗೇನಾದರೂ ಸಂದೇಶವನ್ನು ನೀಡಲಿಚ್ಛಿಸಿದರೇ? ಇವೆಲ್ಲವೂ ರಾಜಕೀಯ ತಂತ್ರಗಾರಿಕೆಗಳೇ? ಇವುಗಳು ಉತ್ತರ ಸಿಗದ ಪ್ರಶ್ನೆಗಳು.