ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ; ಬಿಜೆಪಿ-ಜೆಡಿಯು ಜಯಭೇರಿ; ಕಾಂಗ್ರೆಸ್‌ಗೆ ಮುಖಭಂಗ (NDA | Bihar | Nitish Kumar | Congress)
Bookmark and Share Feedback Print
 
ಪಾಟ್ನಾ: ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟ ಮತ್ತೆ ಮೀಸೆ ತಿರುವಿದೆ. ಹಿಂದೆಂದೂ ಕಂಡಿರದ ಅಮೋಘ ಜಯವನ್ನು ಎನ್‌ಡಿಎ ಸಾಧಿಸಿದೆ. ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷಗಳು ಹೇಳ ಹೆಸರಿಲ್ಲದಂತಾಗಿವೆ. ನಿತೀಶ್ ಕುಮಾರ್ ನಾಯಕತ್ವಕ್ಕೆ ಜನತೆ ಮನತುಂಬಿ ಹರಸಿದ್ದಾರೆ.

ಆರು ಹಂತಗಳಲ್ಲಿ ನಡೆದಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಬುಧವಾರ ಬೆಳಿಗ್ಗೆ ಆರಂಭವಾಗಿತ್ತು. ಆರಂಭದಿಂದಲೇ ಭಾರೀ ಮುನ್ನಡೆ ಪಡೆದುಕೊಂಡ ಆಡಳಿತ ಪಕ್ಷ (ಜೆಡಿಯು-ಬಿಜೆಪಿ) ಕೊನೆಯವರೆಗೂ ಭಾರೀ ಅಂತರವನ್ನು ಕಾಯ್ದುಕೊಂಡಿದ್ದು, ಭರ್ಜರಿ ಜಯಭೇರಿ ಬಾರಿಸಿದೆ. ಬಹುಮತದ ಹತ್ತಿರ ಜೆಡಿಯು ಏಕಾಂಗಿಯಾಗಿ ಸರಿದಿರುವುದು ಕೂಡ ಫಲಿತಾಂಶದಲ್ಲಿ ಕಂಡು ಬಂದಿರುವ ಅಚ್ಚರಿ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಮತ್ತೊಬ್ಬ ಫೈರ್‌ಬ್ರಾಂಡ್ ವರುಣ್ ಗಾಂಧಿಯವರನ್ನು ಪ್ರಚಾರಕ್ಕೆ ಇಳಿಸದೆ, ಸರಕಾರದ ಪ್ರಗತಿಯನ್ನೇ ಮುಂದಿಟ್ಟುಕೊಂಡು ಕಣಕ್ಕಿಳಿದಿದ್ದ ಬಿಜೆಪಿಯಂತೂ ಚುನಾವಣೆಯಲ್ಲಿ ಭರ್ಜರಿ ಬೋನಸ್ ಪಡೆದುಕೊಂಡಿದೆ. 2005ರ ಚುನಾವಣೆಗಿಂತ ಸರಿಸುಮಾರು ಅರ್ಧದಷ್ಟು ಸೀಟುಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ.

ಅತ್ತ ಲಾಲೂ ಪ್ರಸಾದ್ ಯಾದವ್ (ಆರ್‌ಜೆಡಿ) ಮತ್ತು ರಾಮ್ ವಿಲಾಸ್ ಪಾಸ್ವಾನ್ (ಎಲ್‌ಜೆಪಿ) ಅವರ ಮೈತ್ರಿಕೂಟವು ನೆಲಕಚ್ಚಿರುವುದು ಹಾಗೂ ಕಾಂಗ್ರೆಸ್ ನಾಮಾವಶೇಷ ಸ್ಥಿತಿಗೆ ತಲುಪಿರುವುದು ಕೂಡ ಬಿಹಾರದ ಮತದಾರರು ಎಷ್ಟು ಬದಲಾಗಿದ್ದಾರೆ ಎಂಬುದನ್ನು ತೋರಿಸಿದೆ.

2005ರ ಮತ್ತು ಇದೀಗ ಪ್ರಕಟವಾಗಿರುವ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷ20052010ಬದಲಾವಣೆಈ ಬಾರಿ ಸ್ಪರ್ಧೆ
ಜೆಡಿಯು88115+27141
ಬಿಜೆಪಿ5591+36102
ಆರ್‌ಜೆಡಿ5422-36168
ಎಲ್‌ಜೆಪಿ103-0775
ಕಾಂಗ್ರೆಸ್94-05243
ಇತರ278-19---
ಒಟ್ಟು243243------


ಬಹುಮತಕ್ಕೆ 122 ಸಾಕು...
ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅದರಲ್ಲಿ 122 ಶಾಸಕರನ್ನು ಹೊಂದಿದ ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಸರಕಾರ ರಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜೆಡಿಯು-ಬಿಜೆಪಿಯ ಎನ್‌ಡಿಎ ಒಕ್ಕೂಟವು ಶೇ.70ಕ್ಕೂ ಹೆಚ್ಚು ಮತ ಪಡೆದಿದೆ. ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷಗಳು ಬಹುಮತದ ಹತ್ತಿರಕ್ಕೂ ಸುಳಿಯುವ ಅವಕಾಶವನ್ನು ಹೊಂದಿಲ್ಲ.

ಕಾಂಗ್ರೆಸ್‌ಗೆ ಮುಖಭಂಗ...
'ಯುವರಾಜ' ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿಗಳು ಬಿಹಾರ ಚುನಾವಣೆಗಾಗಿ ಪ್ರಚಾರ ಮಾಡಿದ್ದರು. ಈ ಬಾರಿ ಗೆಲುವು ನಮ್ಮದೇ ಎಂದು ಬೆನ್ನು ತಟ್ಟಿಕೊಂಡಿದ್ದರು. ಅವರೆಲ್ಲರಿಗೂ ಈಗ ಮುಖ ತೋರಿಸಲಾಗದಷ್ಟು ಅಪಮಾನವಾಗಿದೆ.

ಕೇಂದ್ರದ ಅನುದಾನಗಳನ್ನು ಎನ್‌ಡಿಎ ಮೈತ್ರಿಕೂಟವು ದುರುಪಯೋಗಪಡಿಸಿಕೊಂಡಿದೆ, ಬಿಜೆಪಿ ಜತೆ ಸಂಬಂಧ ಇಟ್ಟುಕೊಂಡಿರುವ ನಿತೀಶ್ ಇಬ್ಬಗೆಯ ನೀತಿ ಪ್ರದರ್ಶಿಸುತ್ತಿದ್ದಾರೆ ಎಂಬ ರೀತಿಯ ಹತ್ತು ಹಲವು ಆರೋಪಗಳನ್ನು ಕಾಂಗ್ರೆಸ್ ಮಾಡಿತ್ತು. ಅವೆಲ್ಲಕ್ಕೂ ಮತದಾರರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದ್ದು, ಎನ್‌ಡಿಎ ಗೆಲುವಿಗೆ ನಿತೀಶ್ ಸೂತ್ರಧಾರಿ ಎಂದು ಬಣ್ಣಿಸಿದೆ.

ಲಾಲೂ-ಪಾಸ್ವಾನ್‌ಗೂ ಇದೇ ಗತಿ..
ಮುಂದಿನ ಮುಖ್ಯಮಂತ್ರಿ ನಾನೇ ಎಂದು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ವರಿಷ್ಠ ಲಾಲೂ ಪ್ರಸಾದ್ ಯಾದವ್ ಹೇಳಿದ್ದರು. ಅದು ಹಗಲುಗನಸು ಎನ್ನುವುದು ಇಂದು ಸಾಬೀತಾಗಿದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದ ಲಾಲೂಗೆ ವಾಸ್ತವ ಸ್ಥಿತಿ ಅರಿವಾಗಿದೆ.

ಮುಸ್ಲಿಂ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದ ಲಾಲೂ ಮತ್ತು ಪಾಸ್ವಾನ್‌ಗೆ ತೀವ್ರ ನಿರಾಸೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ