ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಗೂ ಕರ್'ನಾಟಕ' ಅಂತ್ಯ; ಸಿಎಂ ಯಡ್ಡಿ ತಲೆದಂಡವಿಲ್ಲ (BS Yeddyurappa | BJP | Nitin Gadkari | Karnataka)
Bookmark and Share Feedback Print
 
ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದ ನಾಟಕಕ್ಕೆ ಬಿಜೆಪಿ ಹೈಕಮಾಂಡ್ ಕೊನೆಗೂ ತೆರೆ ಎಳೆದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುವುದಿಲ್ಲ ಎಂದು ಘೋಷಿಸಿದೆ.

ಕರ್ನಾಟಕದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷವು ಮಹತ್ವದ ತೀರ್ಮಾನಕ್ಕೆ ಬಂದಿದೆ. ಮುಖ್ಯಮಂತ್ರಿಯವರನ್ನು ಬದಲಾಯಿಸುವ ಯಾವುದೇ ಪ್ರಶ್ನೆ ತಮ್ಮ ಮುಂದಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಪ್ರಕಟಿಸಿದ್ದಾರೆ.

ಸ್ವಜನಪಕ್ಷಪಾತ ಮತ್ತು ಭೂಹಗರಣಗಳ ಸುಳಿಯಲ್ಲಿ ನಾಯಕತ್ವ ಬದಲಾವಣೆ ಭೀತಿಯಲ್ಲಿದ್ದ ಯಡಿಯೂರಪ್ಪನವರನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಆಗ್ರಹಿಸಿದ್ದರೂ, ಬಿಜೆಪಿ ಹೈಕಮಾಂಡ್ ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎದುರಿಸಿದ ಒತ್ತಡಗಳನ್ನು ನಿಭಾಯಿಸುವಲ್ಲಿ ವಿಫಲವಾಗಿ ತೂಕ ಕಳೆದುಕೊಂಡಿದೆ ಎಂದೇ ಹೇಳಲಾಗುತ್ತಿದೆ.

ಯಡ್ಡಿ ಸ್ಥಾನಕ್ಕೆ ಧಕ್ಕೆಯಿಲ್ಲ: ಗಡ್ಕರಿ
ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯದ ನಾಯಕರುಗಳ ಜತೆ ಚರ್ಚಿಸಿದ ಬಳಿಕ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಗಡ್ಕರಿಯವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧ ಬಂದಿರುವ ಭೂ ಹಗರಣಗಳ ಕುರಿತು ಕರ್ನಾಟಕ ಸರಕಾರ ತನಿಖೆಗೆ ಆದೇಶಿಸಿದೆ. ಇದು ಸೇರಿದಂತೆ ಯಾವುದೇ ಆರೋಪಗಳು ಬಂದರೂ ಅದರ ತನಿಖೆಗೆ ಸಹಕರಿಸುವಂತೆ ಕೋರಲಾಗಿದೆ. ಈ ಸಂಬಂಧ ಸೂಕ್ತ ಸಹಕಾರವನ್ನು ನಾವು ಕೂಡ ನೀಡುತ್ತೇವೆ ಎಂದು ಗಡ್ಕರಿ ತಿಳಿಸಿದ್ದಾರೆ.

ಕರಿಕೋಟಿನಲ್ಲಿ ಮಿಂಚಿದ ಯಡ್ಡಿ...
ಬಿಜೆಪಿ ವರಿಷ್ಠರು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿ ಇಂತಹ ಮಹತ್ವದ ತೀರ್ಮಾನಕ್ಕೆ ಬಂದ ನಂತರ ಯಡಿಯೂರಪ್ಪ ಮುಖದ ಕಳೆಯೇ ಬದಲಾಗಿದೆ. ಕರಿಕೋಟಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮಿಂಚುತ್ತಿದ್ದ ಅವರು, ತನ್ನ ಆಪ್ತೇಷ್ಟರಿಗೆ ಸಿಹಿ ಹಂಚಿದ್ದಾರೆ.

ಅವರಿಗೆ ಸಾಥ್ ನೀಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸದ ಡಿ.ವಿ. ಸದಾನಂದ ಗೌಡ, ಪ್ರಭಾಕರ ಕೋರೆ, ಸಂಸದ ಡಿ.ಬಿ. ಚಂದ್ರೇಗೌಡ ಮುಂತಾದವರು.

ನೈತಿಕತೆ ತಿರುಚಿತೇ ಕೇಸರಿ ಪಕ್ಷ?
ಕಾಂಗ್ರೆಸ್ ಮತ್ತಿತರ ಪಕ್ಷಗಳು ಹಗರಣಗಳಲ್ಲಿ ಮುಳುಗೆದ್ದಾಗ ರಾಜೀನಾಮೆ ನೀಡಲೇಬೇಕು ಎಂದು ಹಾದಿಬೀದಿ ರಂಪ ಮಾಡುತ್ತಿದ್ದ ಬಿಜೆಪಿ ಈಗ ಕೊಡುವ ಉತ್ತರವೇನು? ಇಂತಹ ಪ್ರಶ್ನೆಯೇ ಅಪ್ರಸ್ತುತ ಎಂದು ಸ್ವತಃ ಕೇಸರಿ ಪಕ್ಷ ಸಮರ್ಥನೆ ಮಾಡಿಕೊಳ್ಳುತ್ತದೆಯೇ?

ಇತ್ತೀಚಿನ ಪ್ರಕರಣಗಳನ್ನೇ ತೆಗೆದುಕೊಂಡರೆ ಐಪಿಎಲ್ ವಿಚಾರದಲ್ಲಿ ಶಶಿ ತರೂರ್, ಆದರ್ಶ ಸೊಸೈಟಿ ಹಗರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್, 2ಜಿ ಹಗರಣದಲ್ಲಿ ಎ. ರಾಜಾ ಮುಂತಾದವರು ರಾಜೀನಾಮೆ ನೀಡುವಂತಾಗಲು ಪ್ರಮುಖ ಕಾರಣ ಬಿಜೆಪಿ. ಕೇಸರಿ ಪಕ್ಷವು ಎದ್ದುಬಿದ್ದು ಹೋರಾಟ ನಡೆಸಿ ಇದನ್ನು ಸಾಧಿಸಿತ್ತು.

ಆದರೆ ಸ್ವತಃ ಬಿಜೆಪಿಯ ಮೇಲೆ ಮಹತ್ತರ ಆರೋಪ ಬಂದಾಗ ನುಣುಚಿಕೊಂಡಿದೆ. ನೈತಿಕತೆಯ ಪ್ರಶ್ನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ತನ್ನ ಪಕ್ಷದ ಪ್ರಗತಿಯನ್ನಷ್ಟೇ ಗಮನಕ್ಕೆ ತೆಗೆದುಕೊಂಡು ಹಗರಣಗಳ ಸೂತ್ರಧಾರಿ ಯಡಿಯೂರಪ್ಪನವರನ್ನು ಮುಂದುವರಿಸಲು ನಿರ್ಧರಿಸಿದೆ.

ಯಡಿಯೂರಪ್ಪ ಬ್ಲ್ಯಾಕ್‌ಮೇಲ್...
ನಾಯಕತ್ವ ಬದಲಾವಣೆ ಮಾಡಲು ಅವಕಾಶ ನೀಡುವುದೇ ಇಲ್ಲ. ನಾನು ರಾಜೀನಾಮೆಯನ್ನೇ ನೀಡುವುದಿಲ್ಲ. ಅಂತಹ ಸಂದರ್ಭ ಬಂದರೆ ವಿಧಾನಸಭೆಯನ್ನೇ ವಿಸರ್ಜಿಸುತ್ತೇನೆ. ನನ್ನನ್ನು ಎದುರು ಹಾಕಿಕೊಂಡರೆ ಪಕ್ಷ ತೊರೆಯುತ್ತೇನೆ ಎಂದು ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದರು ಎಂದು ವರದಿಗಳು ಹೇಳಿದ್ದವು.

ಜತೆಗೆ ವೀರಶೈವ ಸ್ವಾಮೀಜಿಗಳ ಮೂಲಕವೂ ಒತ್ತಡ ಹೇರಲಾಗಿತ್ತು. ಕರ್ನಾಟಕ ಬಿಜೆಪಿಯ ಕೆಲವು ಬಣಗಳು ಯಡಿಯೂರಪ್ಪನವರ ಪರ ಬ್ಯಾಟಿಂಗ್ ಮಾಡಿದ್ದವು. ಈ ಒತ್ತಡವನ್ನು ಸಹಿಸಿಕೊಳ್ಳಲಾಗದ ಬಿಜೆಪಿ, ಯಡಿಯೂರಪ್ಪನವರಿಗೆ ಮಣಿದಿದೆ; ಬ್ಲ್ಯಾಕ್‌ಮೇಲ್ ಯಶಸ್ವಿಯಾಗಿದೆ ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ