ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷವು ನನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚನೆ ನೀಡಿದೆ; ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ, ಅಡ್ವಾಣಿ, ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದ ವರಿಷ್ಠರು ಸೂಚಿಸಿದ್ದಾರೆ. ನನಗೆ ಯಾವುದೇ ಷರತ್ತುಗಳನ್ನು ಕೂಡ ವಿಧಿಸಿಲ್ಲ ಎಂದರು.
ನನ್ನ ಮತ್ತು ರಾಜ್ಯದ ಏಳ್ಗೆಯನ್ನು ಸಹಿಸಲಾಗದೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳ ಕುರಿತು ನ್ಯಾಯಾಂಗ ತನಿಖೆಗೂ ಆದೇಶ ನೀಡಲಾಗಿದೆ ಎಂದು ಹೇಳಿರುವ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಗಮನ ಕೊಡುತ್ತೇನೆ ಎಂದಿದ್ದಾರೆ.
ಜನತೆಯ ವಿಶ್ವಾಸ, ಶಾಸಕರು ಸಂಸದರ ವಿಶ್ವಾಸ ಮತ್ತು ಪಕ್ಷದ ವರಿಷ್ಠ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರತಿಪಕ್ಷಗಳು ಮಾಡಿರುವ ಆಧಾರ ರಹಿತ ಆರೋಪಗಳ ವಿರುದ್ಧ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ನನ್ನ ಬಲವನ್ನು ತೋರಿಸುತ್ತೇನೆ ಎಂದರು.
ನಿನ್ನೆ ತಡರಾತ್ರಿಯವರೆಗೆ ಬಿಜೆಪಿ ವರಿಷ್ಠರು ಸಭೆ ನಡೆಸಿದ ನಂತರ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ನಿರ್ಧರಿಸಿದ್ದರು. ಇದು ಇಂದು ಬೆಳಗ್ಗೆ ತಿಳಿಯುತ್ತಿದ್ದಂತೆ ಯಡಿಯೂರಪ್ಪನವರ ಬಣ ಸಂಭ್ರಮಿಸಿತು. ನಂತರ ಕೆಲವೇ ಹೊತ್ತಿನಲ್ಲಿ ಬಿಜೆಪಿ ವಕ್ತಾರರು ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಬಳಿಕ ಮುಖ್ಯಮಂತ್ರಿಯವರು ಗಡ್ಕರಿಯವರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆಯ ಹೊತ್ತಿಗೆ ಸಿಎಂ ಕರ್ನಾಟಕಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ.