ಮೊಬೈಲ್ ನಮ್ಮ ಸಮಾಜದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಿರುವಷ್ಟೇ ಆವಾಂತರಗಳನ್ನೂ ಸೃಷ್ಟಿಸಿದೆ ಎಂಬುದನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಆದರೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹೆಣ್ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಿರುವುದು ಮಾತ್ರ ವಿವಾದಕ್ಕೆ ಕಾರಣವಾಗಿದೆ.
ತಮ್ಮ ಪ್ರೇಮಿಗಳ ಜತೆ ಹುಡುಗಿಯರು ಓಡಿ ಹೋಗುತ್ತಿರುವುದು ಹೆಚ್ಚಿರುವ ಹಿನ್ನೆಲೆಯಲ್ಲಿ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಅವಿವಾಹಿತ ಹೆಣ್ಮಕ್ಕಳಲ್ಲಿ ಮೊಬೈಲ್ ಇಲ್ಲದೆ ಇದ್ದರೆ ಅವರು ಓಡಿ ಹೋಗಲಾರರು ಎಂಬುದು ಅವರ ಯೋಚನೆ. ಅಂದ ಹಾಗೆ ಇಂತಹ ನಿಷೇಧವನ್ನು ಹೇರಿರುವುದು ಗ್ರಾಮ ಪಂಚಾಯತ್.
ಮುಜಾಫರನಗರ ಜಿಲ್ಲೆಯ ಲಂಕ್ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಗ್ರಾಮದ ಎಲ್ಲಾ ಜಾತಿ ಮತ್ತು ಸಮುದಾಯಗಳ ಜನ ಸಭೆ ಸೇರಿದ ನಂತರ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಮೊಬೈಲ್ ಫೋನುಗಳು ಯುವ ಜನತೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಚರ್ಚಿಸಿ, ಇಂತಹ ಆದೇಶ ನೀಡಲಾಗಿದೆ ಎಂದು ಪಂಚಾಯತ್ ಮೂಲಗಳು ಹೇಳಿವೆ.
'ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಯುವಕರ ಜತೆ ಯುವತಿಯರು ಪರಾರಿಯಾಗುತ್ತಿರುವುದನ್ನು ತಡೆಯಲು, ಅವಿವಾಹಿತ ಹುಡುಗಿಯರು ಮೊಬೈಲ್ ಫೋನು ಬಳಸುವುದರ ಮೇಲೆ ಪಂಚಾಯತ್ ನಿಷೇಧ ಹೇರಿದೆ' ಎಂದು ಪಂಚಾಯತ್ ವಕ್ತಾರ ರಾಜೇಂದ್ರ ಮಲಿಕ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಕ್ರಮಕ್ಕೆ ಮಹಿಳಾ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ನವೆಂಬರ್ 14ರಂದು ಸಭೆ ಸೇರಿದ್ದ ಇದೇ ಜಿಲ್ಲೆಯ ಶರೋಮ್ ಗ್ರಾಮದ ಎಲ್ಲಾ ಖಾಪ್ ಪಂಚಾಯಿತಿಗಳು, ಸಗೋತ್ರ ವಿವಾಹವನ್ನು ಒಕ್ಕೊರಲಿನಿಂದ ವಿರೋಧಿಸಿದ್ದವು. ಅಲ್ಲದೆ 1995ರ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ದವು.