ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟವು ಜಯಭೇರಿ ಬಾರಿಸಿರುವುದರಿಂದ ಉಬ್ಬಿ ಹೋಗಿರುವ ಕೇಸರಿ ಪಕ್ಷವು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ. ಮತದಾರರು ಕುಟುಂಬ ರಾಜಕಾರಣಕ್ಕೆ ಮಹತ್ವ ಕೊಡುವುದಿಲ್ಲ, ಅವರು ಸಮರ್ಥ ನಾಯಕತ್ವವನ್ನು ಬೆಂಬಲಿಸುತ್ತಾರೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಒಂದು ಕುಟುಂಬ ಅಥವಾ ವರ್ಚಸ್ಸು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗದು ಮತ್ತು ಬಿಹಾರದ ರಾಜಕೀಯ ಬದಲಾಗಿದೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ತೋರಿಸಿವೆ ಎಂದು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಮತ್ತು ಕಾಂಗ್ರೆಸ್ ಪರ ಭಾರೀ ಪ್ರಚಾರ ಮಾಡಿದ್ದ ರಾಹುಲ್ ಗಾಂಧಿಯವರನ್ನು ಟೀಕಿಸುತ್ತಾ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.
ದೃಢ ಮತ್ತು ಪರಿಪೂರ್ಣತೆಯ ಯಶಸ್ವಿ ಸರಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರನ್ನು ಪ್ರಶಂಸಿಸಿದ ಜೇಟ್ಲಿ, ಅವರ ನಾಯಕತ್ವ ಮತ್ತು ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿದ ರೀತಿ ನಮಗೆ ಹೆಮ್ಮೆ ತಂದಿದೆ ಎಂದರು.
ಕೀರ್ತಿ ನಿತೀಶ್‌ಗೆ: ಕಾಂಗ್ರೆಸ್ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತ ಪಕ್ಷಗಳಾದ ಜೆಡಿಯು-ಬಿಜೆಪಿ ಮೈತ್ರಿಕೂಟವು ಯಶಸ್ಸು ಗಳಿಸಿರುವ ಕೀರ್ತಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲ್ಲಬೇಕು. ಅವರ ನಾಯಕತ್ವದ ಅಡಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಕಾಂಗ್ರೆಸ್ ಬೆಣ್ಣೆ ಸವರಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿದಿತ್ತು. ಪಕ್ಷ ಸಂಘಟನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿತ್ತು ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವರ್ಚಸ್ಸು ಇಲ್ಲಿ ಕೆಲಸ ಮಾಡಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಅವರು, ಉತ್ತರ ಪ್ರದೇಶ ಮತ್ತು ಬಿಹಾರಗಳ ನಡುವೆ ವ್ಯತ್ಯಾಸಗಳಿವೆ ಎಂಬುದಕ್ಕೂ ತಲೆದೂಗಿದ್ದಾರೆ. ಮುಂದಿನ ಬಾರಿ ಸುಧಾರಣೆಗೆ ಯತ್ನಿಸುತ್ತೇವೆ ಎಂದಿದ್ದಾರೆ.
ಜಾತಿ ರಾಜಕಾರಣಕ್ಕೆ ತಿಲಾಂಜಲಿ... ಬಿಹಾರದ ಮತದಾರರು ಜಾತಿ, ಕುಟುಂಬ ರಾಜಕಾರಣಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ. ಆ ಮೂಲಕ ಅಭಿವೃದ್ಧಿ ರಾಜಕಾರಣವನ್ನು ಬಲಗೊಳಿಸಿದ್ದಾರೆ. ಇದು ಭಾರತದ ರಾಜಕಾರಣ ಬದಲಾಗುತ್ತಿರುವುದರ ಸಂಕೇತ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾವು ಜತೆಯಾಗಿ ಕೆಲಸ ಮಾಡಿದರೆ, ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಬಿಹಾರದ ಮತದಾರರು ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮರು ಆಯ್ಕೆ ಬಯಸಿದ್ದಾರೆ ಎಂದರು.