ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಒಂದು ಹಂತಕ್ಕೆ ಬಂದು ನಿಲ್ಲುವ ಹೊತ್ತಿಗೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ. ಅಚಾನಕ್ ಆಗಿ ಮುಖ್ಯಮಂತ್ರಿಯಾಗಿದ್ದ ಕೆ. ರೋಸಯ್ಯ ತನ್ನ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ. ಈ ನಡುವೆ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿಗಳೂ ಬರುತ್ತಿವೆ.
ಪಕ್ಷದೊಳಗಿನ ಅಸಹಕಾರಗಳೇ ರೋಸಯ್ಯ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆರೋಗ್ಯದ ಕಾರಣದಿಂದ ತಾನು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿಯಾಗಿ ನಾನು ರಾಜ್ಯದ ಅಭಿವೃದ್ಧಿಗೆ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯತ್ನಿಸಿದ್ದೇನೆ. ನನ್ನನ್ನು ರಾಜೀನಾಮೆ ನೀಡಿ ಎಂದು ಯಾರೂ ಹೇಳಿಲ್ಲ, ನನ್ನದೇ ಸ್ವಂತ ನಿರ್ಧಾರದಿಂದ ಈ ನಿಲುವಿಗೆ ಬಂದಿದ್ದೇನೆ ಎಂದು ಬುಧವಾರ ರೋಸಯ್ಯ ಹೇಳಿಕೆ ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿಯನ್ನಾಗಿ ಆಂಧ್ರಪ್ರದೇಶದ ಜನತೆಗೆ ಹತ್ತಿರವಾಗಿರುವವರನ್ನೇ ಆಯ್ಕೆ ಮಾಡುವಂತೆ ನಾನು ಕಾಂಗ್ರೆಸ್‌ಗೆ ಒತ್ತಾಯಿಸುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.
14 ತಿಂಗಳ ಹಿಂದೆ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ರೋಸಯ್ಯ ಆಂಧ್ರದ ಸಿಎಂ ಆಗಿ ನೇಮಕಗೊಂಡಿದ್ದರು. ಬಳಿಕ ವೈಎಸ್ಆರ್ ಪುತ್ರ ಜಗನ್ ಮೋಹನ್ ರೆಡ್ಡಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ಯತ್ನಿಸಿದ್ದರಾದರೂ, ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡ ಜಗನ್, ನಂತರದ ದಿನಗಳಲ್ಲಿ ರೋಸಯ್ಯ ಅವರಿಗೆ ಕಿರುಕುಳ ನೀಡಲಾರಂಭಿಸಿದ್ದರು.
ರೋಸಯ್ಯ ರಾಜೀನಾಮೆ ಪ್ರಕಟಿಸುತ್ತಿದ್ದಂತೆ, ಸಿಎಂ ಹುದ್ದೆಯ ರೇಸ್ ಆರಂಭವಾಗಿದೆ. ಆಂಧ್ರ ವಿಧಾನಸಭೆಯ ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿ, ಪ್ರವಾಸೋದ್ಯಮ ಸಚಿವೆ ಗೀತಾ ರೆಡ್ಡಿ, ಪಂಚಾಯತ್ ರಾಜ್ ಸಚಿವ ಬಿ. ಸತ್ಯನಾರಾಯಣ ಮತ್ತು ಕೇಂದ್ರದಲ್ಲಿ ಸಚಿವರಾಗಿರುವ ಜೈಪಾಲ್ ರೆಡ್ಡಿ ಇವರಲ್ಲಿ ಪ್ರಮುಖರು.
ರೋಸಯ್ಯ ಕರ್ನಾಟಕ ರಾಜ್ಯಪಾಲ? ರೋಸಯ್ಯ ರಾಜೀನಾಮೆ ಕಾಂಗ್ರೆಸ್ ಪೂರ್ವ ನಿಯೋಜಿತ ಬೆಳವಣಿಗೆ ಎಂದೂ ಹೇಳಲಾಗುತ್ತಿದೆ. ಅದು ನಿಜವೇ ಆಗಿದ್ದರೆ, ರೋಸಯ್ಯ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಳ್ಳುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ಇದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿರುವುದು ಕಳೆದ ಕೆಲ ದಿನಗಳಿಂದ ರೋಸಯ್ಯ ಮತ್ತು ಕರ್ನಾಟಕದ ಪ್ರಸಕ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ದೆಹಲಿ ಭೇಟಿಯಲ್ಲಿರುವುದು. ಇಬ್ಬರೂ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚಿನ ಬಂಡಾಯ ಶಾಸಕರ ವಿಚಾರದಲ್ಲಿ ರಾಜ್ಯಪಾಲ ಭಾರದ್ವಾಜ್ ನಡೆದುಕೊಂಡ ರೀತಿ ಸ್ವತಃ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಒಂದು ಹಂತದಲ್ಲಿ ಬದಲಾವಣೆಯ ಯೋಚನೆಯನ್ನೂ ಮಾಡಿತ್ತು. ಬಹುಶಃ ಅದನ್ನು ಈಗ ಕಾರ್ಯಗತಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ದೆಹಲಿಯಲ್ಲಿ ಪತ್ರಕರ್ತರಿಗೆ ಸಿಕ್ಕಿದ್ದ ರಾಜ್ಯಪಾಲ ಭಾರದ್ವಾಜ್, ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ಬಿಜೆಪಿ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವುದು ಕೂಡ ಅವರ ಭವಿಷ್ಯದ ಕುರಿತು ಸಂಶಯಗಳನ್ನು ಹುಟ್ಟು ಹಾಕಿದೆ. ಸಾಮಾನ್ಯವಾಗಿ ಬಿಜೆಪಿ ಸರಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ವಾಗ್ದಾಳಿ ನಡೆಸುತ್ತಾ ಬಂದಿರುವ ರಾಜ್ಯಪಾಲರು ಇಂದು ಮೌನವಹಿಸಿರುವುದು ಕುತೂಹಲ ಕೆರಳಿಸಿದೆ.