ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಿರುವುದನ್ನು ಲೇವಡಿ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಅಲೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯ ಹೆಸರನ್ನು ಜಪಿಸುತ್ತಾ, ತುತ್ತೂರಿ ಊದುತ್ತಿದ್ದರು. ಎಲ್ಲಿ ಹೋಯಿತು ರಾಹುಲ್ ಅಲೆ? ಚುನಾವಣೆಗಳಲ್ಲಿ ಇಂತಹ ಗಿಮಿಕ್‌ಗಳು ನಡೆಯುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಹೇಳಿದರು.
ರಾಹುಲ್ ಅಲೆ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಗುಜರಾತ್‌ಗಳಲ್ಲಿ ಕೆಲಸ ಮಾಡಿಲ್ಲ. ಉತ್ತರ ಪ್ರದೇಶದಲ್ಲೂ ರಾಹುಲ್ ಅಲೆ ಕಾಣಿಸುತ್ತಿಲ್ಲ. ಈಗ ಬಿಹಾರ ಜನತೆಯೂ ರಾಹುಲ್ ಅಲೆ ಎಂಬುದು ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಹಾರದಲ್ಲಿರುವುದು ಆಡಳಿತ ಮತ್ತು ಅಭಿವೃದ್ಧಿ ಅಂಶಗಳು. ಅಟಲ್ ಬಿಹಾರಿ ವಾಜಪೇಯಿ, ಎನ್‌ಡಿಎ, ಜೆಡಿಯು, ನಿತೀಶ್ ಕುಮಾರ್ ಮತ್ತು ಸುಶೀಲ್ ಮೋದಿಯೇ ಹೊರತು ರಾಹುಲ್ ಗಾಂಧಿಯಲ್ಲ ಎಂದು ಅನಂತ್ ವಿವರಣೆ ನೀಡಿದರು.
ದೇಶದಾದ್ಯಂತದ ತನ್ನ ಪ್ರವಾಸದ ಸಂದರ್ಭದಲ್ಲಿ ನೈಜ ಭಾರತ ಎಲ್ಲಿದೆ ಎಂದು ಹುಡುಕುತ್ತಿದ್ದರು. ಆದರೆ ಈಗ ಬಿಹಾರದಲ್ಲಿ ಕಾಂಗ್ರೆಸ್ಸನ್ನು ಹುಡುಕಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ಕುಟುಕಿದರು.
ರಾಹುಲ್ ವಿಫಲರಾಗಿದ್ದಾರೆ: ಕಾಂಗ್ರೆಸ್ ಬಿಹಾರದಲ್ಲಿ ಯಶಸ್ಸು ಪಡೆಯಲು ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಬಿಹಾರದ ಮತದಾರರನ್ನು ಆಕರ್ಷಿಸಲು ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ರಾಹುಲ್ ಅಲೆ ಬಿಹಾರದಲ್ಲಿ ಕೆಲಸ ಮಾಡಿಲ್ಲ ಎಂದರು.
ಚುನಾವಣೆಗೂ ಮೊದಲು ಬಿಹಾರದಾದ್ಯಂತ ಪ್ರವಾಸ ಮಾಡಿದ್ದ ರಾಹುಲ್, ನಿತೀಶ್ ಕುಮಾರ್ ಸರಕಾರವು ರಾಜ್ಯದ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.