ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರದ ಹೊಸ ಮುಖ್ಯಮಂತ್ರಿ ರೆಡ್ಡಿ ರಣಜಿ ಕ್ರಿಕೆಟಿಗ!
(Kiran Kumar Reddy | Andhra Chief Minister | Ranji Cricketer | Royalseema)
ಆಂಧ್ರ ಪ್ರದೇಶದಲ್ಲಿ ಕೆ.ರೋಸಯ್ಯ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ 16ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ, ರಣಜಿ ಕ್ರಿಕೆಟಿಗನಾಗಿದ್ದು, ಹೈದರಾಬಾದ್ ಪರ ಸಾಕಷ್ಟು ಆಟ ಆಡಿದ್ದಾರೆ. ಈಗ ಆಂಧ್ರಪ್ರದೇಶದಲ್ಲಿ ರಾಜಕೀಯದಾಟದ ಕ್ಯಾಪ್ಟನ್ ಆಗಿದ್ದಾರೆ.
ಪ್ರಸ್ತುತ ಆಂಧ್ರ ಅಸೆಂಬ್ಲಿಯ ಸ್ಪೀಕರ್ ಆಗಿರುವ 50ರ ಹರೆಯದ ರೆಡ್ಡಿ, ರಾಯಲ್‌ಸೀಮೆ ಪ್ರದೇಶದ ಚಿತ್ತೂರು ಜಿಲ್ಲೆಯ ಪಿಲರ್ ಕ್ಷೇತ್ರವನ್ನು ನಾಲ್ಕು ಅವಧಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಅವರು ಕೂಡ ಕೌಟುಂಬಿಕ ರಾಜಕಾರಣದ ಕುಡಿಯಾಗಿದ್ದು, ಕಾಂಗ್ರೆಸ್‌ನ ದಿವಂಗತ ಮುಖಂಡ, ಮಾಜಿ ಮಂತ್ರಿ ಎನ್.ಅಮರನಾಥ ರೆಡ್ಡಿಯವರ ಪುತ್ರ. ಅಮರನಾಥ ರೆಡ್ಡಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಅವರಿಗೆ ಆಪ್ತರಾಗಿದ್ದರು ಎಂಬುದೇ ಮುಖ್ಯಮಂತ್ರಿ ಪಟ್ಟವೇರಲು ಸಹಕಾರಿಯಾದ ಅಂಶಗಳಲ್ಲೊಂದು.
ಹೈದರಾಬಾದ್ ಒಸ್ಮಾನಿಯಾ ವಿವಿಯಿಂದ ಬಿ.ಕಾಂ, ಎಲ್ಎಲ್‌ಬಿ ಪದವಿ ಪಡೆದಿರುವ ಅವರು, ಕ್ರಿಕೆಟ್ ಅಭಿಮಾನಿ ಮತ್ತು ಆಟಗಾರನಾಗಿದ್ದು, ವಿವಿ ತಂಡವನ್ನೂ, ಹೈದರಾಬಾದ್ ರಣಜಿ ತಂಡವನ್ನೂ ಪ್ರತಿನಿಧಿಸಿದ್ದಾರೆ. 1989ರಲ್ಲಿ ವಯ್ಲಪಾಡ್ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಅವರುಸ, 1994ರಲ್ಲಿ ಸೋತಿದ್ದರು. ಆದರೆ 1999 ಮತ್ತು 2004ರಲ್ಲಿ ಮತ್ತು ಇದೀಗ 2009ರಲ್ಲಿಯೂ ಪುನರಾಯ್ಕೆಗೊಂಡಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿಯವರ ಆಪ್ತನೂ ಆಗಿದ್ದ ಕಿರಣ್ ಕುಮಾರ್ ರೆಡ್ಡಿ, ಹಿಂದಿನ ಸರಕಾರದಲ್ಲಿ ಸರಕಾರದ ಮುಖ್ಯ ಸಚೇತಕರಾಗಿದ್ದರು. 2009ರಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಿದಾಗ, ಅವರಿಗೆ ವೈಎಸ್ಆರ್ ಸಂಪುಟ ದರ್ಜೆಯ ಸಚಿವಪಟ್ಟ ಕೊಡುತ್ತಾರೆಂದೇ ಎಲ್ಲರೂ ನಂಬಿದ್ದರು. ಆದರೆ ಅಚ್ಚರಿಯೋ ಎಂಬಂತೆ, ಸ್ಪೀಕರ್ ಸ್ಥಾನಕ್ಕೆ ವೈಎಸ್ಆರ್ ಕಿರಣ್ ಅವರನ್ನು ಆರಿಸಿದ್ದರು.
ಪ್ರತಿಪಕ್ಷ ನಾಯಕ, ತೆಲುಗು ದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಕಟ್ಟಾ ಟೀಕಾಕಾರ ಎಂದೇ ಜನಜನಿತವಾಗಿರುವ ರೆಡ್ಡಿ ಅವರಿಬೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ.