ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ವಿರೋಧಿ ತೀಸ್ತಾ ಸೆತಲ್ವಾಡ್ ಬಣ್ಣ ಬಯಲಾಗುತ್ತಿದೆ! (Rais Khan | Teesta Setalvad | Narendra Modi | SIT)
Bookmark and Share Feedback Print
 
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ, ಅವರಿಂದಲೇ ಗುಜರಾತ್ ಹತ್ಯಾಕಾಂಡ ನಡೆಯಿತು, ಹಾಡು ಹಗಲೇ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಸೀಳಿ ಮಗುವನ್ನು ಬೆಂಕಿಗೆ ಹಾಕಲಾಯಿತು ಎಂದೆಲ್ಲ ಪ್ರಚಾರ ಮಾಡುತ್ತಾ ಬಂದ 'ಸಮಾಜ ಸೇವಕಿ' ತೀಸ್ತಾ ಸೆತಲ್ವಾಡ್ ಬಣ್ಣ ನಿಧಾನವಾಗಿ ಬಯಲಾಗುತ್ತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಕೆಯ ಆಪ್ತನಾಗಿದ್ದ ರಾಯಿಸ್ ಖಾನ್ ಎಂಬಾತ ಸೆತಲ್ವಾಡ್ ತಂತ್ರಗಳನ್ನು ಬಹಿರಂಗಪಡಿಸುತ್ತಿದ್ದಾನೆ. ಸೆತಲ್ವಾಡ್ ಹೇಗೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುತ್ತಿದ್ದಳು ಎಂಬುದನ್ನು ಆತ ವಿವರವಾಗಿ ಹೇಳುತ್ತಿದ್ದಾನೆ.
PR

'ಸಿಟಿಜನ್ಸ್ ಫಾರ್ ಜಸ್ಟೀಸ್ ಎಂಡ್ ಪೀಸ್' ಸಮಾಜ ಸೇವಾ ಸಂಘಟನೆಯನ್ನು ನಡೆಸುತ್ತಿರುವ ತೀಸ್ತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಸ್ವತಃ ಆಕೆಯ ಮಾಜಿ ಸಹವರ್ತಿ ಮತ್ತು ಸಂಘಟನೆಯ ಈ ಹಿಂದಿನ ಸಂಯೋಜಕ. ಮುಖ್ಯಮಂತ್ರಿ ಮೋದಿ ಮತ್ತು ಇತರರ ವಿರುದ್ಧ ಆಕೆ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿ ಅಮಾಯಕರನ್ನು ಅದಕ್ಕಾಗಿ ಬಳಸಿಕೊಂಡು ನ್ಯಾಯಾಲಯದಲ್ಲಿ ಸುಳ್ಳು ಹೇಳಿಸುತ್ತಿದ್ದಳು ಎಂದು ಆಪಾದಿಸಲಾಗಿದೆ.

2002ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಒಂಬತ್ತು ಪ್ರಮುಖ ಪ್ರಕರಣಗಳಲ್ಲಿನ ಮುಸ್ಲಿಂ ಸಾಕ್ಷಿಗಳಿಗೆ ಸೆತಲ್ವಾಡ್ ತಲಾ 5,000 ರೂಪಾಯಿಗಳಂತೆ ಪ್ರತಿ ತಿಂಗಳು ಹಣ ಪಾವತಿ ಮಾಡುತ್ತಿದ್ದಳು. ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು ಎಂದು ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ಸೆತಲ್ವಾಡ್ ಅಮಾಯಕ ಮುಸ್ಲಿಮರನ್ನು ಬಲವಂತ ಮಾಡುತ್ತಿದ್ದಳು ಎಂದು ರಾಯಿಸ್ ಖಾನ್ ಆರೋಪಿಸಿದ್ದಾನೆ.

ಹವಾಲ ಹಣವನ್ನು ಸೆತಲ್ವಾಡ್ ಈ ರೀತಿಯಾಗಿ ಬಳಸುತ್ತಿದ್ದಳು. ತನಗೆ ಆಗದವರನ್ನು ಫಿಕ್ಸ್ ಮಾಡಿ, ಅವರನ್ನೇ ಗುರಿ ಮಾಡುತ್ತಿದ್ದಳು. ಇದೆಲ್ಲದರಿಂದ ನಾನು ರೋಸಿ ಹೋಗಿದ್ದೆ. ಮುಸ್ಲಿಮರಿಗೆ ವೃಥಾ ಅನ್ಯಾಯವಾಗುತ್ತಿದೆ ಎಂಬುದು ನನಗೆ ಕಾಡಲಾರಂಭಿಸಿತು. ಈ ಸಂಬಂಧ ಸೂಕ್ತ ತನಿಖೆ ನಡೆದಲ್ಲಿ ಆಕೆಯ ಹಣದ ಮೂಲ ಮತ್ತಿತರ ವಿಚಾರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾನೆ.

ಸೆತಲ್ವಾಡ್ ಈ ರೀತಿ ಸಾಕ್ಷಿಗಳನ್ನು ಹುಟ್ಟು ಹಾಕಿದ್ದರ ಬಗ್ಗೆ ಈ ಹಿಂದೆಯೇ ಸಂಶಯಗಳು ಹುಟ್ಟಿಕೊಂಡಿದ್ದವು. ಸಾಕ್ಷಿಗಳು ಸಲ್ಲಿಸಿದ್ದ ಒಂಬತ್ತು ಪ್ರಕರಣಗಳ ಅಫಿಡವಿತ್‌ಗಳ ಮೇಲೆ ಸುಪ್ರೀಂ ಕೋರ್ಟ್ ಇದೇ ಕಾರಣದಿಂದ ತಡೆಯಾಜ್ಞೆ ವಿಧಿಸಿತ್ತು. ಅಫಿಡವಿತ್‌ನಲ್ಲಿ ಏನು ಬರೆದಿತ್ತು ಎಂಬುದು ತಮಗೆ ಗೊತ್ತೇ ಇಲ್ಲ ಎಂದು ಸಾಕ್ಷಿಗಳು ಹೇಳಿದ್ದರಿಂದ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿತ್ತು. ಸೆತಲ್ವಾಡ್ ಅವರ ಸಂಘಟನೆ ಹೇಳಿದಂತೆ ತಾವು ನಡೆದುಕೊಂಡಿದ್ದೆವು ಎಂದು ಮುಸ್ಲಿಂ ಸಾಕ್ಷಿಗಳು ಹೇಳಿದ್ದರು.
Rais Khan
PR

ಆರೋಪಗಳ ತನಿಖೆ ಸಿಟ್‌ಗೆ...
ಸೆತಲ್ವಾಡ್‌ಳ ಒಂದು ಕಾಲದ ಆಪ್ತ ಇಂತಹ ಗಂಭೀರ ಆರೋಪಗಳನ್ನು ಮಾಡುತ್ತಿದ್ದಂತೆ, ಸಿಟ್ ಇದರ ತನಿಖೆಯನ್ನು ಕೈಗೆತ್ತಿಕೊಂಡಿದೆ. ಖಾನ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟವರ ವಿಚಾರಣೆಯಲ್ಲಿ ಅದು ತೊಡಗಿದೆ.

ಪ್ರತ್ಯಕ್ಷದರ್ಶಿಗಳು ಮತ್ತು ಸಾಕ್ಷಿಗಳನ್ನು ಹೇಗೆ ತಿರುಚಲಾಗುತ್ತಿತ್ತು, ಮೋಸ ಮಾಡಲಾಗುತ್ತಿತ್ತು ಎನ್ನುವುದು ನಾನು ಸಂಘಟನೆಯಲ್ಲಿ ಇದ್ದುದರಿಂದ ನನಗೆ ಗೊತ್ತಿತ್ತು. ಇವೆಲ್ಲವೂ ಸೆತಲ್ವಾಡ್ ಅಣತಿಯಂತೆ ನಡೆಯುತ್ತಿತ್ತು. ಆಕೆ ಸಮುದಾಯದ ಹಿತ ಕಾಯುವ ಹೆಸರಿನಲ್ಲಿ ನಕಲಿ ಅಫಿಡವಿತ್‌ಗಳನ್ನು ಸೃಷ್ಟಿಸುತ್ತಿದ್ದಳು ಎಂದು ಖಾನ್ ಸಿಟ್ ತನಿಖಾ ತಂಡದೆದುರು ತನ್ನ ಆರೋಪವನ್ನು ಸಮರ್ಥಿಸಿಕೊಂಡಿದ್ದಾನೆ.

ಗುಲ್ಬರ್ಗ್ ಸೊಸೈಟಿ ಪ್ರಕರಣದಲ್ಲಿ ನಾನಾವತಿ ಆಯೋಗವು ಪರಿಶೀಲನೆಗೆಂದು ಬಂದಿದ್ದಾಗ, ಹಿಂಸಾಚಾರದ ಸಾಕ್ಷಿಗಳು ಆಯೋಗದ ಕೈಗೆ ಸಿಗದಂತೆ ಮಾಡಿದ್ದು ಸೆತಲ್ವಾಡ್. ಆಕೆಯೇ ನನ್ನನ್ನು ಕರೆದು, ಸಾಕ್ಷಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಿದ್ದಳು. ಅದರಂತೆ ನಾನು ಅವರೆಲ್ಲರನ್ನೂ ಅಹಮದಾದಾಬ್‌ನ ಫ್ಲಾಟ್‌ನಲ್ಲಿ ಇಟ್ಟಿದ್ದೆ. ಅವರಲ್ಲಿ ಯಾರೊಬ್ಬರನ್ನೂ ಆಯೋಗದ ಎದುರು ಬರಲು ಬಿಟ್ಟಿರಲಿಲ್ಲ ಎಂದೂ ಆರೋಪಿಸಿದ್ದಾನೆ.

ಈ ಸೆತಲ್ವಾಡ್ ಯಾರು?
ಈಕೆಯ ಇತಿಹಾಸ ನೋಡುತ್ತಾ ಹೋದರೆ ಒಬ್ಬ ಪತ್ರಕರ್ತೆ ಮತ್ತು ಶೈಕ್ಷಣಿಕ ತಜ್ಞೆ ಎಂಬ ಹಣೆಪಟ್ಟಿಗಳು ಸಿಗುತ್ತವೆ. ಅತುಲ್ ಸೆತಲ್ವಾಡ್ ಮತ್ತು ಸೀತಾ ಸೆತಲ್ವಾಡ್ ಎಂಬ ಗುಜರಾತಿಗಳ ಮಗಳೀಕೆ. ಈಕೆಯ ಗಂಡ ಜಾವೇದ್ ಆನಂದ್.

ಗುಜರಾತ್ ಕೋಮುಗಲಭೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಮುಖ ವಿಲನ್ ಎಂದು ಬಿಂಬಿಸುವಲ್ಲಿ ಸ್ಥಾಪಿತ ಹಿತಾಸಕ್ತಿಗಳ ಜತೆ ಪ್ರಮುಖವಾಗಿ ಕೆಲಸ ಮಾಡಿದ್ದೇ ಈ ಸೆತಲ್ವಾಡ್. ಆ ಮೂಲಕ 'ಜಾತ್ಯತೀತ' ಪಕ್ಷಗಳಿಗೆ ಮತ್ತಷ್ಟು ಹತ್ತಿರವಾಗಿದ್ದಳು.

ಅದಕ್ಕಾಗಿ ಬಂದಿರುವ ಪ್ರಶಸ್ತಿಗಳು ಒಂದೆರಡಲ್ಲ. 2002ರಲ್ಲಿ ರಾಜೀವ್ ಗಾಂಧಿ ಪ್ರಶಸ್ತಿ, ನ್ಯೂಜಿಲೆಂಡ್ ಪ್ರಧಾನಿಯಿಂದ ಪ್ರಜಾಪ್ರಭುತ್ವದ ರಕ್ಷಕಿ ಪ್ರಶಸ್ತಿ, 2003ರಲ್ಲಿ ನ್ಯೂರೆಂಬರ್ಗ್‌ನ ಮಾನವ ಹಕ್ಕು ಪ್ರಶಸ್ತಿ, 2004ರಲ್ಲಿ ಎಂ.ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು ಪುರಸ್ಕಾರ, 2007ರಲ್ಲಿ ಪದ್ಮಶ್ರೀ ಬಿರುದು.

ಈಕೆ ಗುಜರಾತಿನಲ್ಲಿ ನಡೆಸಿರುವ ಆವಾಂತರಗಳು ಒಂದೆರಡಲ್ಲ. ಕೇವಲ ಮೋದಿ ಹೆಸರಿಗಷ್ಟೇ ಕಳಂಕ ತಂದಿಟ್ಟದ್ದಲ್ಲ. ಇಡೀ ದೇಶದಲ್ಲೇ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ವಿರೋಧಿಗಳು ಎಂಬಂತೆ ಬಿಂಬಿಸಿದ್ದು ಕೂಡ ಈಕೆಯೇ. ಕೋಮುಗಲಭೆಯಲ್ಲಿ ಸತ್ತದ್ದು 1044 ಮಂದಿ (254 ಹಿಂದೂಗಳು, 790 ಮುಸ್ಲಿಮರು) ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ ಹೇಳಿದರೂ, ಈಕೆ ಮಾತ್ರ 3,000 ಎಂದು ಅಪಪ್ರಚಾರ ಮಾಡಿದ್ದಳು.

ಇಂತಹ ಮೋಸಗಾತಿ ಎಂಬ ಆರೋಪ ಹೊತ್ತಿರುವ ಸೆತಲ್ವಾಡ್ ಕುರಿತು ಈಗ ತನಿಖೆ ನಡೆಯುತ್ತಿದೆ. ಅದರ ಬಳಿಕ ಆಕೆ ಮಾಡಿರುವ ಅನೇಕ ಘನಕಾರ್ಯಗಳು ಬಯಲಿಗೆ ಬರಬಹುದು.
ಸಂಬಂಧಿತ ಮಾಹಿತಿ ಹುಡುಕಿ