ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಲಕರಿಗೆ ಲೈಂಗಿಕ ಕಿರುಕುಳ; ದೇವಮಾನವ ಮಾವನ ಮನೆಗೆ
(Spiritual guru | Deepak Vishnu Lamkhande | sexual abuse | Pune)
ಆತ ತನ್ನನ್ನು ಗುರುವಾಯೂರು ಸಂತ ತಪಸ್ವಿ ದೀಪಕ್ ವಿಷ್ಣು ಲಂಖಾಡೆ ಮಹಾರಾಜ್ ಎಂದು ಕರೆಸಿಕೊಳ್ಳುತ್ತಿದ್ದಾತ. ತಾನು ಮಹಾನ್ ತಪಸ್ವಿ ಎಂಬುದನ್ನು ತೋರಿಸಿಕೊಳ್ಳಲು ದೇವಸ್ಥಾನವೊಂದರ ಸಮೀಪವೇ ಕೊಠಡಿಯೊಂದರಲ್ಲಿ ನೆಲೆಸಿದ್ದ. ಯಾವತ್ತೂ ಭಜನೆಗಳನ್ನು ಹಾಡುತ್ತಾ, ಪುರಾಣಗಳನ್ನು ಓದಿ ಹೇಳುತ್ತಾ ಕಾಲ ಕಳೆಯುತ್ತಿದ್ದಾತ.
ಈಗ ಮಾತ್ರ ಸಿಕ್ಕಿ ಬಿದ್ದಿದ್ದಾನೆ. ಆತನೇ ನಡೆಸುತ್ತಿದ್ದ 'ಬಾಲಕರ ಆಶ್ರಮ ಶಾಲೆ'ಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಹುಡುಗರು ಆರೋಪ ಮಾಡಿದ ನಂತರ ಪೊಲೀಸರು 'ಮಾವನ ಮನೆ'ಗೆ ತಳ್ಳಿದ್ದಾರೆ.
PR
ಇದು ನಡೆದಿರುವುದು ಪುಣೆಯ (ಮಹಾರಾಷ್ಟ್ರ) ಮೋಶಿಯಲ್ಲಿನ ಶಿವಾಜಿವಾಡಿ ಎಂಬಲ್ಲಿ. ಅನಾಥ ಬಾಲಕರಿಗಾಗಿ ಈ ಆಶ್ರಮವನ್ನು ನಡೆಸುತ್ತಿದ್ದ ಸ್ವಯಂ ಘೋಷಿತ ಧರ್ಮಗುರು ದೀಪಕ್ ಬಗ್ಗೆ ಆತನ ವಿದ್ಯಾರ್ಥಿಗಳೇ ದೂರು ನೀಡಿದ ಬಳಿಕ ಬಂಡವಾಳ ಬಯಲಾಗಿದೆ.
ಪುಟ್ಟ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ ಈತ ಮುಂಜಾನೆ ಮತ್ತು ಮುಸ್ಸಂಜೆ ಹೊತ್ತು ಹೊರಗಡೆ ಕೂತು ಜಪ-ತಪ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಯಾರಾದರೂ ಸಮೀಪಕ್ಕೆ ಹೋದರೆ, 'ಹರಿ ಓಂ ಹರಿ' ಎಂದೆಲ್ಲಾ ಹೇಳುತ್ತಿದ್ದ.
ಅಲ್ಲೇ ಇರುವ ದೇವಸ್ಥಾನಕ್ಕೆ ಸಂಬಂಧಪಟ್ಟವರಿಗೂ ಈ ದೀಪಕ್ ಎಲ್ಲಿಂದ ಬಂದವನು, ಯಾಕಾಗಿ ಬಂದಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳಿರಲಿಲ್ಲ.
ಆರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದ. ದೇವಸ್ಥಾನವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ನಂತರ ನಾವು ಅಲ್ಲೇ ಇದ್ದ ಒಂದು ಪುಟ್ಟ ಕೊಠಡಿಯನ್ನು ಆತನಿಗೆ ನೀಡಿದ್ದೆವು ಎಂದು ದೇವಸ್ಥಾನವನ್ನು ಕಟ್ಟಿಸಿರುವ ಕುಟುಂಬದ ಸದಸ್ಯ ಹನುಮಂತ್ ಸಾಸ್ತೆ ಹೇಳಿದ್ದಾರೆ.
ಈತ ದೇವಸ್ಥಾನ ಸೇರಿಕೊಳ್ಳುವಾಗಲೇ, ತಾನೊಬ್ಬ ಬ್ರಹ್ಮಾಚಾರಿ ಮತ್ತು ತನ್ನ ಜತೆ ಏಳು ಅನಾಥ ಮಕ್ಕಳಿದ್ದಾರೆ. ಅವರು ನನ್ನ ಅನುಯಾಯಿಗಳು ಎಂದು ಹೇಳಿದ್ದ. ಈಗ ಆತನ ಜತೆಗಿದ್ದ ಹುಡುಗರೇ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ಮತ್ತೊಂದು ಅಚ್ಚರಿಯ ವಿಚಾರವೆಂದರೆ ಈ 'ದೇವಮಾನವ'ನಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಇಬ್ಬರು ಮಕ್ಕಳಿದ್ದಾರೆ ಎನ್ನುವುದು.
ತನಗೆ ಈ 'ಗುರು' ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು 16ರ ಹುಡುಗನೊಬ್ಬ ತನ್ನ ಆಪ್ತರಲ್ಲಿ ದೂರಿಕೊಂಡಿದ್ದ. ಇದನ್ನು ನೆರೆಮನೆಯವರಿಗೆ ಹೇಳಿದ ನಂತರ ಎಲ್ಲರೂ ಎಚ್ಚೆತ್ತುಕೊಂಡು ಗುರುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ ಅನಾಥರೆಂದು ಹೇಳಿದ್ದ ಬಾಲಕರು ನಿಜವಾಗಿಯೂ ಅನಾಥರಲ್ಲ. ಅವರು ಹಗಲು ಹೊತ್ತು ಇಲ್ಲೇ ಸಮೀಪದ ಶಾಲೆಗೆ ಹೋಗುತ್ತಿದ್ದರು. ರಾತ್ರಿ ಹೊತ್ತು ಈತನ ಆಶ್ರಮದಲ್ಲಿದ್ದರು. ಅವರನ್ನು ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತನ್ನ ಜತೆ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಯನ್ನು ಬಂಧಿಸಿದ ನಂತರ ಪೊಲೀಸರು ತಿಳಿಸಿದ್ದಾರೆ.