ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದ್ರೋಹಿಗಳ ಹೊಡೆದೋಡಿಸಿದ ಕಾಶ್ಮೀರಿ-ಹಿಂದೂಗಳು (Hurriyat Conference | Mirwaiz Umar Farooq | Kashmiri Pandit | Omar Abdullah)
Bookmark and Share Feedback Print
 
ಚಂಡೀಗಢ: ಪ್ರತ್ಯೇಕತಾವಾದಿಗಳ ಆಟೋಪಗಳಿಗೆ ಕೇಂದ್ರ ಸರಕಾರ ಕಡಿವಾಣ ಹಾಕಲು ವಿಫಲವಾದರೂ ಜನ ಸುಮ್ಮನೆ ಕೂತಿಲ್ಲ. ದೇಶದಾದ್ಯಂತ ಸಂಚರಿಸುತ್ತಾ ಜನರನ್ನು ಪ್ರಚೋದಿಸುತ್ತಿದ್ದ ಹುರಿಯತ್ ಕಾನ್ಫರೆನ್ಸ್ ನಾಯಕರಾದ ಮಿರ್ವಾಯಿಜ್ ಉಮರ್ ಫಾರೂಕ್ ಮತ್ತು ಬಿಲಾಲ್ ಲೋನ್ ಅವರಿಗೆ ಕಾಶ್ಮೀರಿ ಪಂಡಿತರ ಗುಂಪು ಮತ್ತು ಹಿಂದೂ ಸಂಘಟನೆ ಸದಸ್ಯರು ಮನಬಂದಂತೆ ಥಳಿಸಿದ್ದಾರೆ.

ಕಾಶ್ಮೀರ ಕುರಿತು ವಿಚಾರಗೋಷ್ಠಿಗಾಗಿ ಚಂಡೀಗಢಕ್ಕೆ ಬಂದಿದ್ದ ಈ ಇಬ್ಬರು ನಾಯಕರು ಬಾಯಿಗೆ ಬಂದಂತೆ ಅರಚುತ್ತಿದ್ದ ಸಂದರ್ಭದಲ್ಲಿ ರೊಚ್ಚಿಗೆದ್ದ ಕಾಶ್ಮೀರಿ ಪಂಡಿತರು ಮತ್ತು ಹಿಂದೂ ಸಂಘಟನೆ ಸದಸ್ಯರು, ಸಭೆ ನಡೆಯುತ್ತಿದ್ದ ಹಾಲ್‌ಗೆ ಬಂದು ದಾಂಧಲೆ ಎಬ್ಬಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಹಾಗೂ ಕಾಶ್ಮೀರ ಕುರಿತು ಮಿರ್ವಾಯಿಜ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ಲೋನ್ ಜತೆ ವೇದಿಕೆಯಲ್ಲಿದ್ದ ಮಿರ್ವಾಯಿಜ್ ವಿರುದ್ಧ ಸಭೆಯಲ್ಲಿ ಭಾಗವಹಿಸಿದ್ದವರು ಆಕ್ರೋಶಗೊಂಡಿದ್ದರು. ಈ ಹೊತ್ತಿನಲ್ಲಿ ಪತ್ರಕರ್ತನೊಬ್ಬ ಮಿರ್ವಾಯಿಜ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದ. ಇದಕ್ಕೆ ಉತ್ತರಿಸಿದ ರೀತಿಯಿಂದ ಅಸಮಾಧಾನಗೊಂಡ ಜನರು, ಮಿರ್ವಾಯಿಜ್ ಮುಖಕ್ಕೆ ಹೊಡೆದರು. ಕುರ್ಚಿಯಿಂದ ಕೆಳಗೆ ಬಿದ್ದ ನಂತರವೂ ಥಳಿತ ಮುಂದುವರಿಸಿದರು.

ಪಕ್ಕದಲ್ಲೇ ಕುಳಿತಿದ್ದ ಲೋನ್‌ಗೂ ಜನ ಮನಬಂದಂತೆ ಥಳಿಸಿದರು ಎಂದು ವರದಿಗಳು ಹೇಳಿವೆ.

ದಾಳಿಗೆ ಭಾರತ ವಿರೋಧಿ ಹೇಳಿಕೆಗಳೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ಮತ್ತು ಪಾಕಿಸ್ತಾನದ ವಿರುದ್ಧ ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಸುಮಾರು 30 ನಿಮಿಷಗಳ ಕಾಲ ಸಭಾಂಗಣದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಪ್ರತಿಭಟನಾಕಾರರು ಕಲ್ಲು ಮತ್ತು ಹೂಕುಂಡಗಳನ್ನು ಕೂಡ ಪ್ರತ್ಯೇಕತಾವಾದಿಗಳತ್ತ ತೂರಿದ್ದಾರೆ.

ಈ ಸಂಬಂಧ ಮಹಿಳೆಯರು ಸೇರಿದಂತೆ ಸುಮಾರು 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

'ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ನಾವು ಇಲ್ಲಿ ಅವಕಾಶ ನೀಡುವುದಿಲ್ಲ. ಅದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ' ಎಂದು ಬಂಧನಕ್ಕೊಳಗಾದ ಪ್ರತಿಭಟನಾಕಾರನೊಬ್ಬ ಪ್ರತಿಕ್ರಿಯೆ ನೀಡಿದ್ದಾನೆ.

ಹುರಿಯತ್ ರಾಜಕೀಯಕ್ಕೆ ಪ್ರತ್ಯುತ್ತರ: ಒಮರ್
ಪ್ರತ್ಯೇಕತಾವಾದಿ ಹುರಿಯತ್ ನಾಯಕರ ಮೇಲೆ ಹಲ್ಲೆ ನಡೆದಿರುವುದನ್ನು ಹಗುರವಾಗಿ ಪರಿಗಣಿಸಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದು ಹುರಿಯತ್ ರಾಜಕಾರಣಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಎಂದು ಬಣ್ಣಿಸಿದ್ದಾರೆ.

ಇದು ರಾಜಕೀಯ ಮತ್ತು ಅವರ ನೀತಿಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ಎಂದರು.

ಇದರಲ್ಲಿ ನನ್ನ ಪಾಲು ಏನೂ ಇಲ್ಲ. ಇಂತಹ ಘಟನೆಗಳನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ