ಮುಸ್ಲಿಂ ಹುಡುಗಿ ಕೊಲೆ; ಹಿಂದೂವನ್ನು ಪ್ರೀತಿಸಿದ್ದೇ ತಪ್ಪು!
ಮೊರಾದಾಬಾದ್, ಶುಕ್ರವಾರ, 26 ನವೆಂಬರ್ 2010( 11:23 IST )
ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ, ಅದು ಅವನ್ನೆಲ್ಲ ಮೀರಿದ್ದು. ಪ್ರೀತಿಗೆ ಪ್ರೀತಿಯೇ ಧರ್ಮ -- ಇವೆಲ್ಲ ಆಡುಮಾತುಗಳು ಮಾತ್ರ. ಪ್ರಾಯೋಗಿಕವಾಗಿ ಯಾವುದೂ ಜಾರಿಯಾಗುವಂತಹುದಲ್ಲ. ತಮ್ಮದೇ ಮಕ್ಕಳ ವಿಚಾರಕ್ಕೆ ಬಂದಾಗ ಯಾರೊಬ್ಬರೂ ಸುಮ್ಮನಿರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಿಂದೂ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದ ಪುತ್ರಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಕೊಂದೇ ಹಾಕಿದ್ದಾನೆ.
ಇದು ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ. ಇಲ್ಲಿನ ಮಾವೈತಕುರನ್ ಗ್ರಾಮದಲ್ಲಿನ ಮುಸ್ತಾಕಿಮ್ ಎಂಬಾತ ತನ್ನ 18ರ ಹರೆಯದ ಮಗಳು ರೆಹಾನಾ ಫರ್ವೀನ್ ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆಕೆ ತನ್ನ ಪ್ರಿಯಕರ ಭೋರಾ ಪ್ರಜಾಪತಿಯನ್ನು (21) ಮದುವೆಯಾಗಲು ಹೊರಟಿದ್ದಳು ಎಂಬುದು ಖಚಿತವಾದ ನಂತರ ಮುಸ್ತಾಕಿಮ್ ತನ್ನ ಮಗಳನ್ನು ಕೊಂದಿದ್ದಾನೆ.
ಗ್ರಾಮದ ಹೊರವಲಯದಲ್ಲಿನ ನಿರ್ಜನ ಪ್ರದೇಶದಲ್ಲಿ ಪ್ರಜಾಪತಿ ಮತ್ತು ಫರ್ವೀನ್ ಪ್ರತಿದಿನ ಭೇಟಿಯಾಗುತ್ತಿದ್ದರು. ಆದರೆ ಕೆಲವು ದಿನಗಳಿಂದ ಫರ್ವೀನ್ ಬರದೇ ಇದ್ದುದರಿಂದ ಸಂಶಯಗೊಂಡ ಪ್ರಿಯಕರ ಪ್ರಜಾಪತಿ ಪೊಲೀಸರಿಗೆ ದೂರು ನೀಡಿದ್ದ.
ಈ ಕುರಿತು ಮುಸ್ತಾಕಿಮ್‌ನನ್ನು ಸಾಕಷ್ಟು ವಿಚಾರಣೆ ನಡೆಸಿದ ನಂತರ ಮನೆಗೆ ದಾಳಿ ನಡೆಸಿದ ಪೊಲೀಸರು, ಬೀಗ ಹಾಕಲಾಗಿದ್ದ ಕೊಠಡಿಯಿಂದ ಶವವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆರೋಪಿಯನ್ನು ಕೂಡ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ ಇದು ಮರ್ಯಾದಾ ಹತ್ಯೆ. ಬಲಿಪಶುವಿನ ತಂದೆ ಇದನ್ನು ಒಪ್ಪಿಕೊಂಡಿದ್ದಾನೆ. ಅನ್ಯ ಧರ್ಮದ ಯುವಕನನ್ನು ಮದುವೆಯಾಗುವ ಬಯಕೆ ನನ್ನ ಮಗಳದ್ದಾಗಿತ್ತು. ಇದರಿಂದ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಭೀತಿಯಿಂದ ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಫರ್ವೀನ್ ಕೊಲೆ ಮಾಡಿರುವುದು ಮುಸ್ತಾಕಿಮ್ ಒಬ್ಬನೇ ಅಲ್ಲ, ಆತನಿಗೆ ಮನೆಯವರು ಸಹಕಾರ ನೀಡಿದ್ದಾರೆ ಎಂಬ ಸಂಶಯಗಳಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.