ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ ಪ್ರಧಾನಿಯಾಗೋದು ಆಂಧ್ರ ಸಿಎಂ ಕನಸು (Andhra Pradesh | N Kiran Kumar Reddy | Congress | Rahul Gandhi)
Bookmark and Share Feedback Print
 
ರಾಜ್ಯದಲ್ಲಿ 41 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮತ್ತು ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಬಯಕೆ ತನ್ನ ಗುರು ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರದ್ದಾಗಿತ್ತು. ಅದನ್ನು ನಾನು ನೆರವೇರಿಸಲು ಬಯಸುತ್ತಿದ್ದೇನೆ ಎಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಅವರು, 2014ರೊಳಗೆ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವುದು ಮತ್ತು ಸರಕಾರಕ್ಕೆ ಹೊಸ ಇಮೇಜನ್ನು ನೀಡುವುದು ನನ್ನ ಗುರಿ ಎಂದರು.

ವೈಎಸ್ಆರ್ ರೂಪಿಸಿದ್ದ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಂತೆ ನಾನು ನೋಡಿಕೊಳ್ಳುತ್ತೇನೆ. ಅವರ ನನಸಾಗದ ಕನಸುಗಳನ್ನು ಈಡೇರಿಸುವತ್ತಲೂ ಗಮನ ಹರಿಸುತ್ತೇನೆ. ರಾಜ್ಯದ ಎಲ್ಲಾ ಲೋಕಸಭಾ ಸ್ಥಾನಗಳನ್ನು (42) ಕಾಂಗ್ರೆಸ್ ಗೆಲ್ಲುವುದು ಮತ್ತು ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವುದು ಅವರ ಕನಸಾಗಿತ್ತು ಎಂದು ರೆಡ್ಡಿ ತಿಳಿಸಿದರು.

ಬಿಹಾರದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮುಖಭಂಗ ಅನುಭವಿಸಿರುವ ಬೆನ್ನಿಗೆ ಈ ಹೇಳಿಕೆ ಹೊರ ಬಿದ್ದಿದೆ. ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಿದ್ದ 27 ಕ್ಷೇತ್ರಗಳಲ್ಲಿ ಬಹುತೇಕ ಅಭ್ಯರ್ಥಿಗಳು ನೆಲ ಕಚ್ಚಿದ್ದರು.

ಜಗನ್ ಚಾನೆಲ್ ಗುರಿಯೀಗ ರಾಹುಲ್...
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿರುದ್ಧ ವರದಿಗಳನ್ನು ಪ್ರಸಾರ ಮಾಡಿದ್ದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮಾಲಕತ್ವದ 'ಸಾಕ್ಷಿ' ಸುದ್ದಿವಾಹಿನಿಯೀಗ 'ಯುವರಾಜ' ರಾಹುಲ್ ಮೇಲೆ ಮುಗಿ ಬಿದ್ದಿದೆ.

ಬಿಹಾರ ಚುನಾವಣೆಯಲ್ಲಿ ರಾಹುಲ್ ಅಲೆ ಕೆಲಸ ಮಾಡದೇ ಇರುವುದನ್ನು ಪದೇ ಪದೇ ಪ್ರಸಾರ ಮಾಡುತ್ತಾ ಕಾಂಗ್ರೆಸ್‌ಗೆ ಮುಜುಗರ ಹುಟ್ಟಿಸುತ್ತಿದೆ.

ಭಾರೀ ಚರಿಷ್ಮಾ ಹೊಂದಿದ್ದ ನಾಯಕ ಕಳೆದು ಹೋಗಿದ್ದಾರೆ. ತನ್ನ 125 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಈ ರೀತಿಯ ಮುಖಭಂಗವನ್ನು ಯಾವತ್ತೂ ಅನುಭವಿಸಿರಲಿಲ್ಲ ಎಂದು ಪ್ರಸಕ್ತ ವಿದ್ಯಮಾನಗಳ ಕಾರ್ಯಕ್ರಮದಲ್ಲಿ ವಿಶ್ಲೇಷಣೆ ನಡೆಸಿದೆ.

243 ವಿಧಾನಸಭಾ ಸದಸ್ಯರನ್ನು ಹೊಂದಿರುವ ಬಿಹಾರದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಚುನಾವಣೆಯಲ್ಲಿ 206 ಸ್ಥಾನಗಳನ್ನು ಪಡೆಯುವ ಮೂಲಕ ಜೆಡಿಯು-ಬಿಜೆಪಿ ಮೈತ್ರಿಕೂಟ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಸ್ವತಃ ಸೋನಿಯಾ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಬಿಹಾರದಲ್ಲಿ ಭಾರೀ ಪ್ರಚಾರ ಮಾಡಿದ್ದರು ಎನ್ನುವುದು ಇಲ್ಲಿ ಗಮನಾರ್ಹ.
ಸಂಬಂಧಿತ ಮಾಹಿತಿ ಹುಡುಕಿ