ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಬಂದಿರುವ ಹೊರತಾಗಿಯೂ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವ ಮೂಲಕ ಬಿಜೆಪಿ ಅವಕಾಶವಾದಿತನ ಮತ್ತು ಇಬ್ಬಗೆಯ ನೀತಿಗಳನ್ನು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿರುವ ಸಿಪಿಐ(ಎಂ), ಇದರಿಂದಾಗಿ ಸಂಸತ್ತಿನಲ್ಲಿ ಹಗರಣಗಳ ವಿರುದ್ಧದ ಹೋರಾಟ ನೈತಿಕ ಬಲ ಕಳೆದುಕೊಂಡಿದೆ ಎಂದರು.
ಸ್ವಜನ ಪಕ್ಷಪಾತ ಮತ್ತು ಭೂ ಹಗರಣಗಳ ಆರೋಪಗಳು ಬಂದಿರುವ ಹೊರತಾಗಿಯೂ, ಬಿಜೆಪಿಯು ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಯಲು ನಿರ್ಧರಿಸುರುವುದು ಇಬ್ಬಗೆಯ ನೀತಿ ಮತ್ತು ರಾಜಕೀಯ ಅವಕಾಶವಾದಿತನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.
ತನ್ನ ನಿಲುವುಗಳಿಗೆ ಅಂಟಿಕೊಂಡು ರಾಜ್ಯ ಸರಕಾರವನ್ನು ಉಳಿಸಿಕೊಳ್ಳಲು ಹೊರಟಿರುವ ಬಿಜೆಪಿಯಿಂದಾಗಿ ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಹೋರಾಟವು ಸ್ಪಷ್ಟವಾಗಿ ರಾಜಕೀಯ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಸಿಪಿಐಎಂ ಮುಖವಾಣಿ 'ಪ್ಯೂಪಲ್ಸ್ ಡೆಮಾಕ್ರಸಿ' ಪತ್ರಿಕೆಯಲ್ಲಿ ಬರೆದಿರುವ 'ಡಬ್ಬಲ್ ಸ್ಪೀಕ್, ದಿ ನೇಮ್ ಈಸ್ ಬಿಜೆಪಿ' ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಯೆಚೂರಿ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡ ಮಟ್ಟದ ಭ್ರಷ್ಟಾಚಾರ ಮತ್ತು ಭಾರತದ ಲೂಟಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನಡುವೆ ಇರುವ ವ್ಯತ್ಯಾಸ ಕೊಂಚ ಮಾತ್ರ ಇರುವುದು ಇಂತಹ ಪ್ರಕರಣಗಳಿಂದ ಸ್ಪಷ್ಟವಾಗುತ್ತಿದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
2ಜಿ ತರಂಗಾಂತರ ಹಂಚಿಕೆ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕೆಂದು ಎಡಪಕ್ಷಗಳು ಬಿಜೆಪಿ ಜತೆ ಸಂಸತ್ತಿನಲ್ಲಿ ಕಳೆದ 10 ದಿನಗಳಿಂದ ನಡೆಸುತ್ತಾ ಬಂದಿರುವ ಹೋರಾಟದ ನಡುವೆ ಕೇಸರಿ ಪಕ್ಷವು ಇಂತಹ ನಿರ್ಧಾರಕ್ಕೆ ಬರಲು ಕಾರಣ ತನ್ನ ದಕ್ಷಿಣ ಭಾರತದ ಏಕೈಕ ಸರಕಾರವನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಿಂದ ಎಂದೂ ವಿಶ್ಲೇಷಿಸಿದ್ದಾರೆ.
ಅದೇ ಹೊತ್ತಿಗೆ ಬಿಹಾರದ ಚುನಾವಣಾ ಫಲಿತಾಂಶವು ಜಾತಿ ರಾಜಕಾರಣವನ್ನು ಮಟ್ಟ ಹಾಕಿದೆ, ಅಭಿವೃದ್ಧಿ ಪಥದ ಮೇಲೆ ಮತದಾರರು ಗೆಲ್ಲಿಸಿದ್ದಾರೆ ಎಂಬ ಬಿಜೆಪಿ ವಾದವನ್ನು ಕೂಡ ಸಿಪಿಐಎಂ ಟೀಕಿಸಿದೆ.
ಬಿಹಾರದಲ್ಲಿ ಜಾತಿ ರಾಜಕಾರಣಕ್ಕೆ ಮತದಾರರು ಬೆನ್ನು ಹಾಕಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರಭಾವಿ ಲಿಂಗಾಯತ ಸಮುದಾಯವು ಮುಖ್ಯಮಂತ್ರಿಗೆ ಬೆನ್ನೆಲುಬಾಗಿ ನಿಂತು ಪಕ್ಷವನ್ನೇ ನಿಬ್ಬೆರಗಾಗಿಸಿದೆ. ಇದಕ್ಕೆ ಹೈಕಮಾಂಡ್ ಕೂಡ ಬಗ್ಗಿದೆ ಎಂದು ಯೆಚೂರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಭೂ ಹಗರಣಗಳ ಬಗ್ಗೆ ಕರ್ನಾಟಕವು ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಕ್ರಮ ಕೇವಲ ಕಣ್ಣೊರೆಸುವ ತಂತ್ರ. ನ್ಯಾಯಾಂಗ ತನಿಖೆಯಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಅಧಿಕಾರ ಸಂಬಂಧಪಟ್ಟವರಿಗೆ ಇಲ್ಲದೇ ಇರುವುದರಿಂದ ಇದು ವ್ಯರ್ಥ ಎಂದು ಹೇಳಿದ್ದಾರೆ.