ಮುಂಬೈ ಭಯೋತ್ಪಾದನಾ ದಾಳಿ ಸೂತ್ರದಾರಿಗಳನ್ನು ನ್ಯಾಯಾಂಗದ ಕಟಕಟೆಗೆ ತರಲಾಗುತ್ತದೆ ಎಂದು ವಾಗ್ದಾನ ಮಾಡಿದ್ದ ಪಾಕಿಸ್ತಾನವು ಅದನ್ನು ಈಡೇರಿಸಿಲ್ಲ ಎಂದು ಹೇಳಿರುವ ಗೃಹಸಚಿವ ಪಿ. ಚಿದಂಬರಂ, ಒಂದು ರಾಷ್ಟ್ರವಾಗಿ ತನ್ನ ಜವಾಬ್ದಾರಿಯನ್ನು ಅದು ಅರಿತುಕೊಳ್ಳುತ್ತದೆ ಎಂಬ ಭರವಸೆ ತನ್ನದು ಎಂದಿದ್ದಾರೆ.
ನಮ್ಮ ನೆರೆರಾಷ್ಟ್ರ ಪಾಕಿಸ್ತಾನವು ಮುಂಬೈ ದಾಳಿ ಪಿತೂರಿದಾರರನ್ನು ನ್ಯಾಯಾಂಗದ ಕಟಕಟೆಗೆ ತರುತ್ತೇನೆ ಎಂಬ ಭರವಸೆಯನ್ನು ಈಡೇರಿಸಿಲ್ಲ. ನಮ್ಮ ಪಕ್ಕದ ರಾಷ್ಟ್ರವನ್ನು ನಾವು ಯಾವತ್ತೂ ನಂಬುತ್ತಿರುವಾಗ ನಾವು ನಮ್ಮ ರಕ್ಷಣೆಯ ಬಗ್ಗೆ ನಾವು ಯೋಚನೆ ಮಾಡಬೇಕೆಂಬುದನ್ನು ಇದರಿಂದ ನಾವು ಪಾಠ ಕಲಿತಿದ್ದೇವೆ ಎಂದು ಮುಂಬೈ ಬಲಿಪಶುಗಳಿಗೆ ಸಂತಾಪ ಸೂಚಿಸಿದ ನಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು.
ಪಾಕಿಸ್ತಾನವು ಒಂದು ರಾಷ್ಟ್ರವಾಗಿ, ಒಂದು ಸರಕಾರವಾಗಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ದಾಳಿಯ ಪಿತೂರಿದಾರರನ್ನು ನ್ಯಾಯಾಂಗದ ಕಟಕಟೆಗೆ ತರುವ ಭರವಸೆಯನ್ನು ಈಡೇರಿಸುತ್ತದೆ ಎಂದು ಭೀಕರ ಘಟನೆಯ ಎರಡನೇ ವರ್ಷಾಚರಣೆಯಂದು ನಾನು ಪ್ರಾಮಾಣಿಕವಾಗಿ ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದರು.
ಇಸ್ಲಾಮಾಬಾದ್ ಈಡೇರಿಸದೇ ಇರುವ ಭರವಸೆಗಳನ್ನು ಮೆಲುಕು ಹಾಕಿದ ಚಿದಂಬರಂ, 'ದಾಳಿಯ ಸಂಬಂಧ ಭಾರತ ಹೆಸರಿಸಿರುವ ಎಲ್ಲಾ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಪಿತೂರಿದಾರರನ್ನು, ನಿಯಂತ್ರಕರನ್ನು ಮತ್ತು ಪಾಲುದಾರಿಗಳನ್ನು ನ್ಯಾಯಾಂಗದ ಕಟಕಟೆಗೆ ತರುತ್ತೇವೆ ಎಂದಿದ್ದರು ಎಂದು ವಿವರಣೆ ನೀಡಿದರು.
ಭಾರತ ಕೋರಿರುವ ದಾಳಿಯ ಸೂತ್ರಧಾರಿಗಳ ಧ್ವನಿ ಮಾದರಿಗಳನ್ನು ಇದುವರೆಗೂ ಪಾಕಿಸ್ತಾನವು ಹಸ್ತಾಂತರಿಸಿಲ್ಲ ಎಂದೂ ಸಚಿವರು ತಿಳಿಸಿದ್ದಾರೆ.
ದಾಳಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಪಾಕಿಸ್ತಾನ ಸುಮ್ಮನೆ ಕುಳಿತಿರುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೂಡ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಸೂತ್ರಧಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಾನು ಬದ್ಧನಾಗಿದ್ದೇನೆ ಎಂದು ಈ ಹಿಂದಿನ ಹೇಳಿಕೆಯನ್ನೇ ಪುನರುಚ್ಛರಿಸಿದೆ.
ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ಪತ್ರಕರ್ತರ ಜತೆ ಮಾತನಾಡುತ್ತಾ, ಮುಂಬೈ ದಾಳಿ ಪಿತೂರಿದಾರರನ್ನು ಕಾನೂನು ಕಟಕಟೆಗೆ ತರುತ್ತೇವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಯಾವುದೇ ಸಂಶಯ ಬೇಕಾಗಿಲ್ಲ ಎಂದರು.