ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೇಡಿಸ್ ಕೋಚ್ ಪ್ರಯಾಣ; ಪುರುಷರಿಗೆ ಸ್ತ್ರೀಯರಿಂದ ಛಡಿ!
(Men thrashed | Metro ladies coach | Haryana Police | Women passengers)
ರಾಷ್ಟ್ರ ರಾಜಧಾನಿಯ ಮೆಟ್ರೋ ರೈಲಿನಲ್ಲಿ ನಡೆದ ಘಟನೆಯಿದು. ಮಹಿಳೆಯರಿಗೆಂದು ಮೀಸಲಾಗಿರುವ ಬೋಗಿಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು ಮಿತಿ ಮೀರಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಾರೀಮಣಿಯರು ಪುರುಷರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇವರಿಗೆ ಬೆಂಬಲ ನೀಡಿದ್ದು ಮಹಿಳಾ ಪೊಲೀಸರು!
ದೆಹಲಿ-ಗುರ್ಗಾಂವ್ ನಡುವಿನ ಮೆಟ್ರೋ ರೈಲಿನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳೆಯರಿಗೆಂದು ಮೀಸಲಾಗಿಟ್ಟಿದ್ದ ಬೋಗಿಗಳಿಗೆ ಪುರುಷರು ನುಗ್ಗಲು ಯತ್ನಿಸಿದ ನಂತರ ಆಕ್ರೋಶಗೊಂಡ ಮಹಿಳೆಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
PR
ಪುರುಷ ಪ್ರಯಾಣಿಕರಿಗೆ ಹೊಡೆದಿರುವುದನ್ನು ಒಪ್ಪಿಕೊಂಡು, ಸಮರ್ಥಿಸಿಕೊಂಡಿರುವ ಮಹಿಳಾ ಪ್ರಯಾಣಿಕರು, ಈ ಬಗ್ಗೆ ಹಲವು ಬಾರಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೆವು; ಪುರುಷ ಪ್ರಯಾಣಿಕರು ಕಾನೂನು ಉಲ್ಲಂಘಿಸಿ ಮಹಿಳಾ ಕೋಚ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ನಾವೇ ಇತರರಿಗೆ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ಹಲ್ಲೆ ನಡೆಸಿದ್ದೇವೆ ಎಂದಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ್ದರು? ಗುರ್ಗಾಂವ್‌ನ ಗುರು ದ್ರೋಣಾಚಾರ್ಯ ಮೆಟ್ರೋ ನಿಲ್ದಾಣದಲ್ಲಿ ಪುರುಷರ ಗುಂಪೊಂದು ಮಹಿಳಾ ಬೋಗಿಗೆ ನುಗ್ಗಿ, ಅಪಹಾಸ್ಯ ಮಾಡುತ್ತಾ ಕಿರುಕುಳ ನೀಡಲಾರಂಭಿಸಿತ್ತು. ಈ ಹೊತ್ತಿಗೆ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕರು ಒಟ್ಟು ಸೇರಿ ಹಲ್ಲೆ ನಡೆಸಿದ್ದಾರೆ. ಮುಂದಿನ ನಿಲ್ದಾಣದಲ್ಲಿ ಹರ್ಯಾಣ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿಕೊಂಡು ಪುರುಷ ಪ್ರಯಾಣಿಕರನ್ನು ರೈಲಿನಿಂದ ಹೊರ ದಬ್ಬಿದ್ದಾರೆ.
ಆರಂಭದಲ್ಲಿ ಪುರುಷರು ರೈಲಿನಿಂದ ಇಳಿಯಲು ನಿರಾಕರಿಸಿ, ಪ್ರತಿಭಟನೆಗೆ ಮುಂದಾದರು. ಈ ಹೊತ್ತಿನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರವನ್ನು ರದ್ದುಗೊಳಿಸಲಾಯಿತು. ಬಳಿಕ ಪೊಲೀಸರು ಬಲ ಪ್ರಯೋಗಿಸಿ ಪುರುಷರನ್ನು ಸಂಪೂರ್ಣವಾಗಿ ದಬ್ಬಿದ್ದಾರೆ ಎಂದು ವರದಿಗಳು ಹೇಳಿವೆ.
ಮೆಟ್ರೋ ರೈಲಿನ ಡ್ರೈವರ್ ಕ್ಯಾಬ್ ನಂತರದ ಒಂದು ಕೋಚ್ ಪ್ರತಿ ರೈಲಿನಲ್ಲೂ ಮಹಿಳೆಯರಿಗೆ ಮೀಸಲು. ಈ ಬೋಗಿಯಲ್ಲಿ 12 ವರ್ಷದೊಳಗಿನ ಹುಡುಗರು ಮಹಿಳಾ ಪ್ರಯಾಣಿಕರೊಂದಿಗೆ ಪ್ರಯಾಣಿಸಲು ಅವಕಾಶವಿದೆ. ಇತರರಿಗೆ ಅವಕಾಶವಿಲ್ಲ.