ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಟಿವಿಗೆ ಕುಣಿಯುತ್ತಿರುವ ಶಾರೂಖ್: ಶಿವಸೇನೆ ಕಿಡಿ
(Shiv Sena | Shah Rukh Khan | Pakistani TV | Ajmal Amir Kasab)
ಬಾಲಿವುಡ್ ನಟ ಶಾರೂಖ್ ಖಾನ್ ವಿರುದ್ಧ ಮತ್ತೆ ಶಿವಸೇನೆ ಮುಗಿ ಬಿದ್ದಿದೆ. ಮುಂಬೈ ದಾಳಿಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಖಾನ್ ಪಾಕಿಸ್ತಾನದ ಟಿವಿ ವಾಹಿನಿಯೊಂದಕ್ಕಾಗಿ ಪ್ರದರ್ಶನ ನೀಡಲು ಲಂಡನ್‌ಗೆ ತೆರಳಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.
ಇದನ್ನು ತಳ್ಳಿ ಹಾಕಿರುವ ಖಾನ್ ಕಚೇರಿ, ಶಿವಸೇನೆ ಆರೋಪದಲ್ಲಿ ಹುರುಳಿಲ್ಲ; ಅವರೀಗ 'ಡಾನ್-2'ರ ಚಿತ್ರೀಕರಣಕ್ಕಾಗಿ ಬರ್ಲಿನ್‌ನಲ್ಲಿದ್ದಾರೆ ಎಂದಿದೆ.
ಶಾರೂಖ್ ಖಾನ್ ಭಾರತದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಮುಂಬೈಯಲ್ಲೇ ಬಂಗಲೆ ಕಟ್ಟುತ್ತಿದ್ದಾರೆ. ಆದರೆ ಪಾಕಿಸ್ತಾನದ ಟಿವಿ ಚಾನೆಲ್ ಒಂದಕ್ಕಾಗಿ ಲಂಡನ್‌ನಲ್ಲಿ ಹಾಡಿ-ಕುಣಿಯಲು ಅವರು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಸಂಭವಿಸಿದ ಭಾರೀ ಪ್ರವಾಹಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಖಾನ್ ಇದಕ್ಕೆ ಮುಂದಾಗಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದಿದೆ.
ಭಯೋತ್ಪಾದನಾ ದಾಳಿಗೆ ಬಲಿಯಾದ ಅಮಾಯಕರು ಮತ್ತು ಹುತಾತ್ಮರ ಬಲಿದಾನವನ್ನು ನೆನೆದು, ಬಾಷ್ಪಾಂಜಲಿ ಸಲ್ಲಿಸುವ ಸಮಾರಂಭವು ಸಂಭ್ರಮಿಸುವ ಹಂತಕ್ಕೆ ತಲುಪಿದೆ ಎಂದು ಸಂಪಾದಕೀಯ ಖೇದ ವ್ಯಕ್ತಪಡಿಸಿದೆ.
ಸಾಮ್ನಾ ಇಂತಹ ಸಂಪಾದಕೀಯ ಬರೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಚಿತ್ರನಟನ ಕಚೇರಿ, 'ಶಾರೂಖ್ ಈಗ ಬರ್ಲಿನ್‌ನಲ್ಲಿದ್ದಾರೆ. ಅವರು ಫರ್ಹಾನ್ ಅಖ್ತರ್ ಅವರ ಡಾನ್-2ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಲ್ಲಿಂದ ಬೇರೆಲ್ಲಿಗೂ ಅವರು ಹೋಗುತ್ತಿಲ್ಲ. ಸಾಮ್ನಾ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ' ಎಂದಿದೆ.
ಅದೇ ಹೊತ್ತಿಗೆ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಜೈಲಿನಲ್ಲಿ ಭೇಟಿ ಮಾಡಿರುವ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಮತ್ತು ವಿಪಕ್ಷದ ನಾಯಕ ಬಿಜೆಪಿಯ ಏಕನಾಥ್ ಖಾಡ್ಸೆಯವರ ವಿರುದ್ಧವೂ ಶಿವಸೇನೆ ವಾಗ್ದಾಳಿ ನಡೆಸಿದೆ.
ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಉಗ್ರರಿಗೆ ಐಕ್ಯತೆಯ ಸಂದೇಶವನ್ನು ರವಾನಿಸುವ ನಿಟ್ಟಿನಲ್ಲಿ ತಾಜ್ ಮಹಲ್ ಹೊಟೇಲಿನಲ್ಲಿ ಉಳಿದುಕೊಂಡದ್ದನ್ನು ಲೇವಡಿ ಮಾಡಲಾಗಿದೆ.
ಒಬಾಮ ಅವರೇ, ನೀವು ಹೊಟೇಲಿನಲ್ಲಿ ತಂಗಿದ ದಿನ ನಿಮಗೆ ಭದ್ರತೆ ಒದಗಿಸಲು 50,000 ಪೊಲೀಸರಿದ್ದರು. ಅಷ್ಟೇ ಪೊಲೀಸರನ್ನು ಅಂದು ನಿಯೋಜಿಸಿದ್ದರೆ ಇಂತಹ ಘಟನೆಗಳೇ ನಡೆಯುತ್ತಿರಲಿಲ್ಲ ಎಂದು ಬರೆಯಲಾಗಿದೆ.