ಎರುಮೇಲಿ (ಕೇರಳ), ಶನಿವಾರ, 27 ನವೆಂಬರ್ 2010( 11:29 IST )
WD
WD
ಶಬರಿಮಲೆ ಕ್ಷೇತ್ರವು ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಕೇಂದ್ರವಾಗಿದ್ದು, ಅಯ್ಯಪ್ಪ ಸ್ವಾಮಿಯ ಮುಸಲ್ಮಾನ ಶಿಷ್ಯನಾಗಿರುವ ವಾವರನ ಮಸೀದಿಗೆ ಆಗಮಿಸುವ ಭಕ್ತರಿಗೆ ಸಹಾಯ ಮಾಡಲು ಉಭಯ ಧರ್ಮೀಯರು ಕೈಜೋಡಿಸಿ ಸಾಮರಸ್ಯ ಮೆರೆದಿದ್ದಾರೆ. ಕೇರಳ ವಕ್ಫ್ ಮಂಡಳಿ, ತಿರುವಾಂಕೂರ್ ದೇವಸ್ವಂ ಮಂಡಳಿ ಹಾಗೂ ಸ್ಥಳೀಯ ಮಸೀದಿ ಸಮಿತಿಗಳು ಸಭೆ ನಡೆಸಿ, ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಂಟಿ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿವೆ.
ಎರುಮೇಲಿಯಿಂದ ಶಬರಿಮಲೆಗೆ ಹೆಚ್ಚು ದೂರ ಕ್ರಮಿಸಬೇಕು. ಪುಣ್ಯ ಸನ್ನಿಧಿಗೆ ಪಾದಯಾತ್ರೆ ಪ್ರಾರಂಭವಾಗುವುದು ವಾವರನ ಮಸೀದಿಯಿರುವ ಪ್ರದೇಶದಿಂದ. ಎಲ್ಲಾ ದೇವಸ್ಥಾನಗಳಲ್ಲಿ ಪೂಜಾಕಾರ್ಯ ಮುಗಿಸಿ, ವಾವರನ ಮಸೀದಿ ಬಳಿ ಬಂದು ಸೇರುವಾಗ ಭಕ್ತರೆಲ್ಲ ಬಳಲಿರುತ್ತಾರೆ. ಇಲ್ಲಿಂದ ಬೆಟ್ಟವೇರುವ ಪಾದಯಾತ್ರೆ ಇನ್ನೂ ಕಷ್ಟದ ಕಾರ್ಯ. ಇಂತಹ ಭಕ್ತ ಸಮೂಹಕ್ಕೆ ಸಹಾಯ-ಸೇವೆ ಮಾಡಲು ಉಭಯ ಪಂಗಡಗಳ ಧಾರ್ಮಿಕ ಸಂಸ್ಥೆಗಳು ಮುಂದೆ ಬಂದಿರುವುದು ಇದೇ ಮೊದಲು. ಇದೊಂದು ಐತಿಹಾಸಿಕ ಕಾರ್ಯವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ವಕ್ಫ್ ಬೋರ್ಡ್‌ನ ಅಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ.
ಎರುಮೇಲಿಯ ವಾವರನ ಮಸೀದಿಗೆ ಅದರದೇ ಆದ ವೈಶಿಷ್ಟ್ಯವಿದೆ. ಮೂಲತಃ ಮುಸಲ್ಮಾನ ಡಕಾಯಿತನಾಗಿದ್ದ ವಾವರ, ನಂತರ ದುಷ್ಟ ಶಕ್ತಿಗಳ ಸಂಹಾರಕ ಅಯ್ಯಪ್ಪನ ಆರಾಧಕನಾಗಿದ್ದ. ಆತನು ಕಾಲವಾದ ನಂತರ, ಆತನ ಗೋರಿಯನ್ನು ಮುಸಲ್ಮಾನರು ಪ್ರಾರ್ಥನಾ ಮಂದಿರವಾಗಿ ಮಾರ್ಪಡಿಸಿದ್ದರು. ಐನೂರು ಮೀಟರ್ ದೂರದಲ್ಲೇ ಅಯ್ಯಪ್ಪ ದೇವಾಲಯವಿದೆ. ಮಾರ್ಗ ಮಧ್ಯದಲ್ಲಿ ಸಿಗುವ 'ಪೇಟ್ಟೈತುಳ್ಳಲ್'ಯಲ್ಲಿ ಭಕ್ತರು ಅಯ್ಯಪ್ಪ ಮತ್ತು ಮಹಿಷಿಯ ನಡುವಿನ ಹೋರಾಟ ನೆನಪಿಸಿಕೊಳ್ಳುವ ಸಂಪ್ರದಾಯವೊಂದನ್ನು ಆಚರಿಸುತ್ತಾರೆ ಮತ್ತು ಸ್ಥಳೀಯ ಗಿರಿಜನರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಇಂದಿಗೂ ಅಯ್ಯಪ್ಪ ದೇವಳದಲ್ಲಿ ವಾವರನ ಕುಟುಂಬಿಕರಿಗೂ ಕೆಲವೊಂದು ಅಧಿಕಾರವಿದ್ದು, ಎರಡು ತಿಂಗಳ ಯಾತ್ರಾ ಅವಧಿಯಲ್ಲಿ ಕುಟುಂಬದ ಹಿರಿಯ ವ್ಯಕ್ತಿಯು ಪವಿತ್ರವಾದ ಹದಿನೆಂಟು ಮೆಟ್ಟಿಲುಗಳ ಕೆಳಗೆ ಶಿಬಿರ ಹೂಡುತ್ತಾರೆ.