ಮಹಿಳೆಯರಿಂದ ಪೀಡನೆ ಅನುಭವಿಸುವ ಪುರುಷರಿಗೆ ಕಾನೂನು ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದ ಅಖಿಲ ಭಾರತ ಪತ್ನಿ ಅತ್ಯಾಚಾರ ವಿರೋಧಿ ಸಂಘದ ಅಧ್ಯಕ್ಷನಿಗೆ ಗುಜರಾತ್ ಉಚ್ಚ ನ್ಯಾಯಾಲಯವು ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.
ಅಹಮದಾಬಾದ್ ಮೂಲದ ಈ ಸಂಘಟನೆಯ ಅಧ್ಯಕ್ಷ ದಶರಥ ದೇವ್ಡಾ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಎರಡು ತಿಂಗಳೊಳಗೆ ಮಹಿಳಾ ಸ್ವ ಉದ್ಯೋಗಿಗಳ ಸಂಘಟನೆಗೆ (ಸೇವಾ) ದಂಡವನ್ನು ಪಾವತಿ ಮಾಡಬೇಕೆಂದು ಆದೇಶ ನೀಡಿದೆ.
ಮಹಿಳೆಯರಿಗಾಗಿ ಇರುವ ಕಾನೂನುಗಳನ್ನು ದುರುಪಯೋಗ ಮಾಡಲಾಗುತ್ತಿದೆ. ಈ ಸಂಬಂಧ ನ್ಯಾಯಾಂಗವು ಮಧ್ಯ ಪ್ರವೇಶಿಸಬೇಕು. ಪುರುಷರಿಗೆ ತಮ್ಮ ಪತ್ನಿಯರಿಂದ ರಕ್ಷಣೆ ಒದಗಿಸಬೇಕು. ಭಾರೀ ಸಂಖ್ಯೆಯಲ್ಲಿ ಪುರುಷರು ತಮ್ಮ ಹೆಂಡತಿಯರಿಂದ ಅನ್ಯಾಯಕ್ಕೆ ಒಳಗಾಗುತ್ತಿದ್ದರೂ, ಅವರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅರ್ಜಿದಾರ ಹೇಳಿದ್ದ.
ಒಂದು ವೇಳೆ ಎರಡು ತಿಂಗಳೊಳಗೆ ದಂಡವನ್ನು ಪಾವತಿಸಲು ಅರ್ಜಿದಾರ ದಶರಥ ವಿಫಲನಾದಲ್ಲಿ, ಆತನ ಆಸ್ತಿಯನ್ನು ಜಫ್ತಿ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಗಂಡಸರು, ಅದರಲ್ಲೂ ಗಂಡಂದಿರಿಗೆ ತಮ್ಮ ಪತ್ನಿಯರ ಕಿರುಕುಳ, ಚಿತ್ರಹಿಂಸೆಯಿಂದ ರಕ್ಷಿಸಿಕೊಳ್ಳಲು ಕಾನೂನು ಭದ್ರತೆಯನ್ನು ಒದಗಿಸಬೇಕು ಎಂದು ದಶರಥ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಪೊಲೀಸ್ ಮಹಾ ನಿರ್ದೇಶಕ ಎಸ್.ಎಸ್. ಖಂಡ್ವಾವಾಲಾ ಅವರನ್ನು ಇದಕ್ಕೆ ಪ್ರತಿವಾದಿಗಳು ಎಂದೂ ತನ್ನ ಅರ್ಜಿಯಲ್ಲಿ ನಮೂದಿಸಿದ್ದ.
ಭಾರತೀಯ ದಂಡ ಸಂಹಿತೆ ಮತ್ತು ಗೃಹ ಹಿಂಸೆ ಕಾಯ್ದೆ ಅಡಿಯಲ್ಲಿ ಪುರುಷರ ದೌರ್ಜನ್ಯಗಳಿಂದ ಸ್ತ್ರೀಯರಿಗೆ ರಕ್ಷಣೆ ಒದಗಿಸಲಾಗಿರುವುದರಿಂದ, ಮಹಿಳೆಯರಿಂದ ಪುರುಷರಿಗಾಗುವ ದೌರ್ಜನ್ಯಕ್ಕೂ ಕಾನೂನು ರಕ್ಷಣೆ ಒದಗಿಸಬೇಕು ಎಂದು ದಶರಥ ತನ್ನ ಅರ್ಜಿಯಲ್ಲಿ ವಾದಿಸಿದ್ದ.
ಸರಕಾರದ ಪರವಾಗಿ ಹೈಕೋರ್ಟಿನಲ್ಲಿ ವಾದಿಸಿದ ಪ್ರಕಾಶ್ ಜಾನಿ, 'ಭಾರತದ ಕಾನೂನುಗಳೆಲ್ಲ ಮಹಿಳೆಯರ ಪರವಾಗಿವೆ, ಗಂಡಂದಿರನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಹಾಗಾಗಿ ಸಂಬಂಧಪಟ್ಟವರು ಹೊಸ ಕಾನೂನುಗಳನ್ನು ರೂಪಿಸಿ, ಜಾರಿಗೆ ತರಬೇಕು ಎಂದು ಬಯಸುತ್ತಿದ್ದಾರೆ' ಎಂದರು.
ಇಂತಹ ವಾದಗಳು ಸರಿಯಲ್ಲ. ಹಾಗಾಗಿ ಅರ್ಜಿದಾರರ ಮನವಿಯನ್ನು ವಜಾಗೊಳಿಸಿ ಅವರಿಗೆ ದಂಡ ಹೇರಬೇಕು ಎಂದು ಸರಕಾರಿ ವಕೀಲರು ಮನವಿ ಮಾಡಿದರು.
ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಮೂರ್ತಿಗಳು, ಅರ್ಜಿದಾರನಿಗೆ ಒಂದು ಲಕ್ಷ ರೂಪಾಯಿ ದಂಡ ಹೇರಲು ನಿರ್ಧರಿಸಿದರು.
ನೀವು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ಇನ್ನೊಂದು ಶಬ್ದ ಎತ್ತಿದರೂ ನಿಮ್ಮ ಮೇಲೆ ಎರಡು ಲಕ್ಷ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ದಶರಥನಿಗೆ ನ್ಯಾಯಾಧೀಶರು ಸೂಚಿಸಿದರು.