ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಲ್ಲಾ ರಕ್ಷಿಸುತ್ತಾನೆ: ಕಸಬ್ | ಆತ ಬದುಕಬೇಕು: ಉಣ್ಣಿಕೃಷ್ಣನ್
(Allah | Ajmal Kasab | Mumbai attack | K Unnikrishnan)
ಅಲ್ಲಾ ರಕ್ಷಿಸುತ್ತಾನೆ: ಕಸಬ್ | ಆತ ಬದುಕಬೇಕು: ಉಣ್ಣಿಕೃಷ್ಣನ್
ಮುಂಬೈ, ಶನಿವಾರ, 27 ನವೆಂಬರ್ 2010( 11:47 IST )
ಇಸ್ಲಾಂ ಧರ್ಮ ಗ್ರಂಥಗಳನ್ನು ಓದುವುದರಲ್ಲೇ ಮುಳುಗಿರುವ ಪಾಕಿಸ್ತಾನಿ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಅಲ್ಲಾಹು ರಕ್ಷಿಸುತ್ತಾನೆ ಎಂಬ ನಂಬಿಕೆ. ಅತ್ತ ಮಗನನ್ನು ಕಳೆಕೊಂಡಿರುವ ಕೆ. ಉಣ್ಣಿಕೃಷ್ಣನ್, ಕಸಬ್ ಬದುಕಿರಬೇಕು ಎಂದು ಹೇಳಿದ್ದಾರೆ.
ಕಸಬ್ ಯಾವುದೇ ರೀತಿಯಲ್ಲೂ ಸಿಡಿಮಿಡಿಗೊಂಡಿಲ್ಲ. ಇಸ್ಲಾಂ ಧರ್ಮಗ್ರಂಥಗಳನ್ನು ಓದುತ್ತಿದ್ದಾನೆ. ದೇವರು ತನ್ನ ಹಣೆಬರಹದಲ್ಲಿ ಮಧ್ಯ ಪ್ರವೇಶಿಸಬಹುದು ಎಂಬ ಭರವಸೆಯಲ್ಲಿದ್ದಾನೆ ಎಂದು ಆತನ ಚಟುವಟಿಕೆಗಳನ್ನು ಸಿಸಿಟಿವಿಯಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿರುವ ಆರ್ಥರ್ ರೋಡ್ ಜೈಲಿನ ಅಧಿಕಾರಿಯೊಬ್ಬರು ಮುಂಬೈ ದಾಳಿಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಲ್ಲಾಹು ನನ್ನನ್ನು ರಕ್ಷಿಸಲು ಖಂಡಿತಾ ಬರುತ್ತಾನೆ, ನನ್ನನ್ನು ಬದುಕಲು ಅವಕಾಶ ಮಾಡಿಕೊಡುತ್ತಾನೆ ಎಂದು ಕಸಬ್ ಆಗಾಗ ಹೇಳುತ್ತಿರುತ್ತಾನೆ ಎಂದು ಕಾರಾಗೃಹ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಕಸಬ್‌ಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ಪ್ರಕಟಿಸಿದ್ದು, ಪ್ರಸಕ್ತ ಇದನ್ನು ಖಚಿತಪಡಿಸುವ ವಿಚಾರಣೆ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ.
ಆತ ಮತ್ತು ಆತನ ಸಹಚರರು ನಗರದ ಮೇಲೆ ಎರಗಿ ಪುಡಿಗೈದು ಶುಕ್ರವಾರಕ್ಕೆ ಎರಡು ವರ್ಷ ತುಂಬಿದೆ ಎಂಬುದು ಆತನಿಗೆ ತಿಳಿದಿದೆ. ಯಾವತ್ತೂ ಆತ ತನ್ನ ಆಕ್ರೋಶ ಮತ್ತು ಸಿಡಿಮಿಡಿಯನ್ನು ಪ್ರದರ್ಶಿಸುತ್ತಿರುತ್ತಾನೆ. ಆದರೆ ಇಂದು ಮಾತ್ರ (ಶುಕ್ರವಾರ) ಸುಮ್ಮನಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆತ ಬದುಕಬೇಕು: ಉಣ್ಣಿಕೃಷ್ಣನ್ ಕಸಬ್ ಸಾಯಬೇಕು ಎಂದು ಇಲ್ಲಿ ನಾನೇ ಕಳೆದ ವರ್ಷ ಹೇಳಿದ್ದೆ. ಆದರೆ ನನ್ನ ಈಗಿನ ಅನಿಸಿಕೆ ಪ್ರಕಾರ ಕಸಬ್ ಸಾಯಬಾರದು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ದೃಢತೆ ನೀಡುವ ಸಲುವಾಗಿ ಆತ ಬದುಕಬೇಕು ಎಂದು ಹುತಾತ್ಮ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ತಂದೆ ಕೆ. ಉಣ್ಣಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಕಸಬ್ ವಿಚಾರಣೆ ಮತ್ತೆ ನಡೆಯಬೇಕೆಂಬ ಬೇಡಿಕೆಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆ ಬಂದಾಗ ಉತ್ತರಿಸಿದ ಉಣ್ಣಿಕೃಷ್ಣನ್, 'ಮತ್ತೆ ವಿಚಾರಣೆ ನಡೆಯಬೇಕಾದ ಅಗತ್ಯವಿಲ್ಲ. ಅಂತಹ ಬೇಡಿಕೆಯೇ ಮೂರ್ಖತನದ್ದು' ಎಂದರು.
ಹುತಾತ್ಮರು ಮತ್ತು ಬಲಿಪಶುಗಳಿಗೆ ಗೌರವ ಅರ್ಪಿಸುವ ನಿಟ್ಟಿನಲ್ಲಿ ಅವರು ದೆಹಲಿಯಿಂದ ಮುಂಬೈಗೆ ಸೈಕಲ್ ರ‌್ಯಾಲಿ ನಡೆಸಿದ್ದರು. ಶುಕ್ರವಾರ ಇದನ್ನು ಮುಂಬೈಯಲ್ಲಿ ಸಮಾಪ್ತಿಗೊಳಿಸಲಾಯಿತು.