ಭಾರತೀಯ ರಾಜಕಾರಣದ ಅತಿ ಶುದ್ಧ, ಸಚ್ಚಾರಿತ್ರ್ಯವಂತ ವ್ಯಕ್ತಿಯೆಂದರೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ -- ಹೀಗೆಂದು ಹೇಳಿರುವುದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ.
ಯುವ ನಾಯಕರ ಜತೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ತೂರಿ ಬಂದ ಪ್ರಶ್ನೆಯೊಂದಕ್ಕೆ ಮೇಲಿನಂತೆ ರಾಹುಲ್ ಉತ್ತರಿಸಿದರು.
ದೇಶದ ಮೂವರು ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣಿಗಳನ್ನು ಹೆಸರಿಸಿ ಎಂದಾಗ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ಗೃಹಸಚಿವ ಪಿ. ಚಿದಂಬರಂ ಅವರ ಹೆಸರುಗಳನ್ನು ತಿಳಿಸಿದರು.
ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಅಹಮದಾಬಾದ್, ರಾಜಕೋಟ್ ಮತ್ತು ವಡೋದರಾಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವ ನಾಯಕರೊಂದಿಗೆ ಆಪ್ತ ಸಂವಾದಗಳನ್ನು ನಡೆಸಿದ್ದಾರೆ.
ಕಾಂಗ್ರೆಸ್ ವಿದ್ಯಾರ್ಥಿ ಘಟಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟಕ್ಕೆ (ಎನ್ಎಸ್‌ಯುಐ) ಸದಸ್ಯರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಹುಲ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮಗಳಿಂದ ಮಾಧ್ಯಮಗಳನ್ನು ದೂರ ಇಡಲಾಗಿತ್ತು.
ಎನ್ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಹನಾವಾಜ್ ಶೇಖ್ ಮತ್ತು ಇದರ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯ ವಿನಯ ಸಿನ್ಹ ನೀಡಿರುವ ಮಾಹಿತಿ ಪ್ರಕಾರ, ರಾಹುಲ್ ಗಾಂಧಿಯವರು ಪ್ರಧಾನಿ ಸಿಂಗ್ ಅವರನ್ನು ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ರಹಿತ ವಿಚಾರದಲ್ಲಿ 'ಗುಂಡು ನಿರೋಧಕ ವ್ಯಕ್ತಿ' ಎಂದು ಬಣ್ಣಿಸಿದ್ದಾರೆ.
ಮಾಜಿ ಪ್ರಧಾನ ಮಂತ್ರಿಗಳಾದ ತನ್ನ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ನನಸಾಗದ ಕನಸುಗಳು, ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವ ಬಯಕೆ ತನ್ನದು ಎಂದು ಇದೇ ಸಂದರ್ಭದಲ್ಲಿ ರಾಹುಲ್ ಹೇಳಿದ್ದಾರೆ.
ಜನಸಾಮಾನ್ಯರು ಅಚ್ಚರಿಕೊಳ್ಳುವಂತೆ ಸಂಪರ್ಕ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ. ಅದೇ ಕಾರಣದಿಂದ ಶ್ರೀಮಂತರ ಕೈಯಲ್ಲಿ ಮಾತ್ರವಿದ್ದ ದೂರವಾಣಿ ಸಾಧನಗಳು ಇಂದು ಪ್ರತಿ ಬಡವನ ಕೈಯಲ್ಲೂ ಹರಿದಾಡುತ್ತಿದೆ ಎಂದರು.