ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೆಲಸ ಮಾಡಿಲ್ಲ, ಸಂಬಳಾನೂ ಬೇಡ: ಸೋನಿಯಾ, ರಾಹುಲ್ (Congress | Sonia Gandhi | Rahul Gandhi | Parliament)
Bookmark and Share Feedback Print
 
ಕೆಲಸ ಮಾಡಿದರೆ ಮಾತ್ರ ಸಂಬಳ, ಕೆಲಸ ಮಾಡದಿದ್ದರೆ ಸಂಬಳ ಯಾಕೆ? ಇದು ಜನ ಸಾಮಾನ್ಯರ ಪ್ರಶ್ನೆ. ಇದೇ ತತ್ವವನ್ನು ಕಾಂಗ್ರೆಸ್ ಕೂಡ ಅನುಸರಿಸಲು ನಿರ್ಧರಿಸಿದೆ. ಆ ಮೂಲಕ ಗಾಂಧಿವಾದಿ ತಾನೆಂಬುದನ್ನು ಮೆರೆದಿದೆ.

ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿ ಸರಿಸುಮಾರು ಮೂರು ವಾರಗಳೇ ಆಗಿದ್ದರೂ, ನೆಟ್ಟಗೆ ಕಲಾಪ ನಡೆದಿರುವುದು ಕೆಲವು ದಿನ ಮಾತ್ರ. ಹಗರಣ ಸಂಬಂಧ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಕಿತ್ತಾಟದಿಂದಾಗಿ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸಂಸದರು ಪ್ರಾಮಾಣಿಕತೆ ಮೆರೆಯಲು ಯತ್ನಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂಸದರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರು, ರಾಜ್ಯಸಭಾ ಸದಸ್ಯರು ಸ್ವ-ಇಚ್ಚೆಯಿಂದ ಸ್ಪೀಕರ್ ಮೀರಾ ಕುಮಾರ್‌ಗೆ ಪತ್ರ ಬರೆದಿದ್ದು, ಸಂಸತ್ತು ಕಲಾಪ ನಡೆಯದ ದಿನದ ದಿನಭತ್ಯೆಯನ್ನು ತಮಗೆ ಕೊಡುವುದು ಬೇಡ ಎಂದು ಕೇಳಿಕೊಂಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಭನ್ಸಾಲ್ ತಿಳಿಸಿದ್ದಾರೆ.

ಸಂಸತ್‌ನ ಪ್ರತಿ ಸದಸ್ಯರಿಗೆ 2,000 ರೂಪಾಯಿ ದಿನಭತ್ಯೆ ನೀಡಲಾಗುತ್ತಿದೆ. ಲೋಕಸಭೆಯ 545 ಸದಸ್ಯರಲ್ಲಿ 207 ಹಾಗೂ ರಾಜ್ಯಸಭೆಯ 245 ಸದಸ್ಯರಲ್ಲಿ 71 ಸದಸ್ಯರು ಕಾಂಗ್ರೆಸ್‌ಗೆ ಸೇರಿದವರು. ಬಹುತೇಕ ಕಾಂಗ್ರೆಸ್ ಸದಸ್ಯರು ದಿನಭತ್ಯೆ ನಿರಾಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಂಸತ್ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳ ಕಲಾಪಕ್ಕಾಗಿ ಸರಕಾರದ ಬೊಕ್ಕಸದಿಂದ ದಿನವೊಂದಕ್ಕೆ ಖರ್ಚಾಗುವ ಒಟ್ಟು ಮೊತ್ತ 7.8 ಕೋಟಿ ರೂಪಾಯಿಗಳು. ಇದುವರೆಗೆ ಸುಮಾರು 12 ದಿನಗಳ ಕಲಾಪ ಚರ್ಚೆಗಳು ನಡೆಯದೆ ಹರಣವಾಗಿದೆ. ಅಂದರೆ ಸರಿಸುಮಾರು 70 ಕೋಟಿಗೂ ಹೆಚ್ಚು ನಷ್ಟ ದೇಶಕ್ಕಾಗಿದೆ. ಕಾಂಗ್ರೆಸ್ ಸದಸ್ಯರ ನಿರ್ಧಾರದಿಂದ ಕೆಲವು ಕೋಟಿಗಳಾದರೂ ಉಳಿಯಬಹುದಾಗಿದೆ.

ಈ ವಿಚಾರವನ್ನು ಮೊದಲು ಸ್ಪೀಕರ್ ಮೀರಾ ಕುಮಾರ್ ಅವರ ಮುಂದಿಟ್ಟಿದ್ದು ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್‌ ತಿವಾರಿ.

ಸಂಸತ್‌ನ ಚಳಿಗಾಲದ ಅಧಿವೇಶನ ಕ್ಷುಲ್ಲಕ ಕಾರಣದಿಂದ ಮುಂದೂಡುತ್ತಾ ಬರಲಾಗುತ್ತಿದೆ. ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದೆ. ಸರಕಾರದ ನಡೆಯನ್ನು ಪ್ರಶ್ನಿಸುವುದು ವಿರೋಧ ಪಕ್ಷಗಳ ಕಾರ್ಯ ಹೌದಾದರೂ, ಅತಿರೇಕಕ್ಕೆ ಹೋಗಬಾರದು. ಹಾಗಾಗಿ 'ಕೆಲಸ ಮಾಡದೇ ಇದ್ದರೆ, ಭತ್ಯೆಯೂ ಇಲ್ಲ' ಎಂಬ ಪದ್ಧತಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ ಎಂದರು.

ಕಾಂಗ್ರೆಸ್ ನಡೆಗೆ ಪ್ರತಿಪಕ್ಷ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಹಗರಣಗಳ ದಿಕ್ಕು ತಪ್ಪಿಸುವ ಹುನ್ನಾರವಿದು; 2ಜಿ ತರಂಗಾಂತರ ಹಗರಣದ ತನಿಖೆಯನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಲು ಕಾಂಗ್ರೆಸ್ ಮೀನಾ-ಮೇಷ ಎಣಿಸುತ್ತಿದೆ. ಹಲವು ಹಗರಣಗಳ ಸುಳಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವುದು ಕಷ್ಟ ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ