ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರಗೀತೆಗೆ ಮಹಾರಾಷ್ಟ್ರ ಸಿಎಂ ಅಗೌರವ, ಕೇಳಿಸಿಲ್ವಂತೆ
(Prithviraj Chavan | National Anthem | Maharashtra | Shiv Sena)
ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆ ಎಂದು ಕೇಳಿ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾನ್, ತಾನು ಹೊರಡುವ ಸಂದರ್ಭದಲ್ಲಿ ರಾಷ್ಟ್ರಗೀತೆ ನುಡಿಸುವ ಮುನ್ಸೂಚನೆ ತನಗೆ ಕೊಟ್ಟಿರಲಿಲ್ಲ ಮತ್ತು ರಾಷ್ಟ್ರಗೀತೆ ಆರಂಭವಾಗಿರುವುದು ನನ್ನ ಅನುಭವಕ್ಕೆ ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಸಂಬಂಧ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಮುಖ್ಯಮಂತ್ರಿ ಚೌಹಾನ್ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆ ನುಡಿಸುವಾಗ ಈ ಪ್ರಸಂಗ ನಡೆದಿತ್ತು.
ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿದ್ದಾಗ ರಾಷ್ಟ್ರಗೀತೆ ನುಡಿಸಲಾಗುತ್ತಿತ್ತು. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ತನ್ನ ಗುಂಪಿನೊಂದಿಗೆ ಇನ್ನೊಂದು ಕಾರ್ಯಕ್ರಮಕ್ಕೆ ಹೊರಟು ಹೋದರು.
ಚೌಹಾನ್ ಅವರ ಜತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಮತ್ತು ಮಿಲಿಂದ್ ದಿಯೋರಾ ಅವರು ಕೂಡ ಹೊರಗೆ ಹೋಗಿದ್ದರು.
'ಜನ ಗಣ ಮನ...' ಎಂಬ ಹಿನ್ನೆಲೆ ಸಂಗೀತವನ್ನು ಹಾಕುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಎದ್ದು ನಿಂತು ಗೌರವಿಸುತ್ತಿದ್ದ ಹೊತ್ತಿನಲ್ಲಿ, ಚೌಹಾನ್ ತನ್ನ ಗುಂಪಿನೊಂದಿಗೆ ವೇದಿಕೆಯನ್ನು ತೊರೆದರು. ಮುಂದಿನ ಸಾಲಿನಲ್ಲಿ ನಿಂತಿದ್ದವರನ್ನು ನೋಡುತ್ತಾ, ಅವರತ್ತ ಕೈ ಆಡಿಸುತ್ತಾ ಹೊರಟು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಚೌಹಾನ್ ತಳ್ಳಿ ಹಾಕಿದ್ದಾರೆ.
ರಾಷ್ಟ್ರಗೀತೆ ನನಗೆ ಕೇಳಿಸಿರಲಿಲ್ಲ. ಈ ಬಗ್ಗೆ ಆಯೋಜಕರು ನನಗೆ ಮಾಹಿತಿಯನ್ನು ಕೂಡ ನೀಡಿರಲಿಲ್ಲ. ರಾಷ್ಟ್ರಗೀತೆ ನನ್ನ ಕಿವಿಗೆ ಬಿದ್ದ ಕೂಡಲೇ ಅಲ್ಲೇ ನಿಂತು, ಗೀತೆ ಮುಗಿದ ನಂತರವಷ್ಟೇ ಮುಂದಕ್ಕೆ ಹೋಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಚೌಹಾನ್ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಗೃಹಸಚಿವ ಆರ್.ಆರ್. ಪಾಟೀಲ್ ಹೇಳಿದ್ದಾರೆ.
ಮುಖ್ಯಮಂತ್ರಿ ವರ್ತನೆಗೆ ಬಿಜೆಪಿ ಮತ್ತು ಶಿವಸೇನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಸುಧೀರ್ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಈ ಒತ್ತಾಯ ಮಾಡಿದ್ದು, ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂದೂ ಒತ್ತಾಯಿಸಲಾಗಿದೆ.