ಆಂಧ್ರ : ಪ್ರಾದೇಶಿಕ ಪಕ್ಷ ಸ್ಥಾಪನೆಯತ್ತ ಜಗನ್ಮೋಹನ್ ಚಿತ್ತ
ಹೈದ್ರಾಬಾದ್, ಭಾನುವಾರ, 28 ನವೆಂಬರ್ 2010( 15:29 IST )
PTI
ನೂತನವಾಗಿ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಎನ್.ಕಿರಣ್ ಕುಮಾರ್ ರೆಡ್ಡಿಯವರಿಗೆ ಕಠಿಣ ಪರಿಸ್ಥಿತಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ವೈ.ಎಸ್, ರಾಜಶೇಖರ್ ರೆಡ್ಡಿ ಪುತ್ರ ಜಗನ್ಮೋಹನ್ ರೆಡ್ಡಿ ಕಾಂಗ್ರೆಸ್ ತೊರೆದು ಪ್ರಾದೇಶಿಕ ಪಕ್ಷ ಸ್ಥಾಪನೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಕಡಪಾ ಸಂಸದ ಜಗನ್ಮೋಹನ್ ರೆಡ್ಡಿ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದು, ಹೈಕಮಾಂಡ್ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಜಗನ್ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಜಗನ್ ಆತ್ಮಿಯ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಿದಲ್ಲಿ ಕೂಡಲೇ ತಾವು ಕಡಪಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ತಮ್ಮ ತಾಯಿ ವಿಜಯಲಕ್ಷ್ಮಿ ಪುಲಿವೆಂದುಲಾ ಕ್ಷೇತ್ರದ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿಗಳು ದಟ್ಟವಾಗಿ ಹರಡಿವೆ.
ನಂತರ, ಜಗನ್ ಪುಲಿವೆಂದುಲಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವ ಉದ್ದೇಶ ಹೊಂದಿದ್ದಾರೆ ಎಂದು ಜಗನ್ ಆತ್ಮಿಯ ಮೂಲಗಳು ಬಹಿರಂಗಪಡಿಸಿವೆ.