ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದ ಜಗನ್ ರಾಜೀನಾಮೆ; ಪತನದತ್ತ ಆಂಧ್ರ ಸರಕಾರ? (Chiranjeevi | N Kiran Kumar Reddy | Praja Rajyam | Y S Jaganmohan Reddy)
Bookmark and Share Feedback Print
 
ಹಲವು ಸಮಯದಿಂದ ಕಾಂಗ್ರೆಸ್ ಹೈಕಮಾಂಡ್ ಜತೆ ಗುದ್ದಾಟ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ತನ್ನ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶದ ಕಾಂಗ್ರೆಸ್ ಸರಕಾರ ಪತನಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ.

ಇದನ್ನು ಮೊದಲೇ ಊಹಿಸಿದ್ದ ಕಾಂಗ್ರೆಸ್ ಪ್ರತಿತಂತ್ರಕ್ಕೆ ಮುಂದಾಗಿದೆ. ಜಗನ್ ಬೆಂಬಲಕ್ಕಿರುವ ಶಾಸಕರು ರಾಜೀನಾಮೆ ನೀಡಿದಲ್ಲಿ, ಸರಕಾರ ಪತನಗೊಳ್ಳದಂತೆ ತಡೆಯಲು ಪ್ರಜಾರಾಜ್ಯಂ ಅಧ್ಯಕ್ಷ ಕೆ. ಚಿರಂಜೀವಿ ಬೆಂಬಲ ಪಡೆದುಕೊಳ್ಳಲು ನಿರ್ಧರಿಸಿದೆ.

ಇದೀಗ ರಾಜೀನಾಮೆ ನೀಡಿರುವ ಜಗನ್ ಕಡಪ ಲೋಕಸಭಾ ಕ್ಷೇತ್ರದ ಸಂಸದ. ಇದರ ಬೆನ್ನಿಗೆ ಅವರ ತಾಯಿ ವಿಜಯಲಕ್ಷ್ಮಿಯವರು ಪುಲಿವೆಂಡುಲಾ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಳಿಕ ಜಗನ್ ನೂತನ ಪಕ್ಷವನ್ನು ಹುಟ್ಟು ಹಾಕಿ, ಚುನಾವಣೆಗೆ ಸ್ಪರ್ಧಿಸುತ್ತಾರೆ. ಈ ನಡುವೆ ಜಗನ್ ಬೆಂಬಲಕ್ಕಿರುವ ಕಾಂಗ್ರೆಸ್‌ನ ಶಾಸಕರು ಮತ್ತು ಸಂಸದರು ಕೂಡ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

ಹಾಗಾದಲ್ಲಿ ಆಂಧ್ರಪ್ರದೇಶ ಸರಕಾರವು ಅಲ್ಪಮತಕ್ಕೆ ಕುಸಿಯುತ್ತದೆ. ಇದನ್ನು ತಪ್ಪಿಸಲು ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿಯವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅದರ ಮೊದಲ ಕ್ರಮವಾಗಿ ಪ್ರಜಾರಾಜ್ಯಂ ಅಧ್ಯಕ್ಷ, ಚಿತ್ರನಟ ಚಿರಂಜೀವಿಯವರ ಜತೆ ಭಾನುವಾರ ರಾತೋರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಇದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ನಡೆದಿರುವುದು ಸ್ಪಷ್ಟ. ಜಗನ್ ಆಟೋಪಗಳನ್ನು ಇನ್ನೂ ಸಹಿಸಿಕೊಂಡಿರಲು ಸಾಧ್ಯವಿಲ್ಲ. ಅವರ ಬೆದರಿಕೆಗಳಿಗೆ ಸೊಪ್ಪು ಹಾಕುವುದು ಬೇಡ. ಚಿರಂಜೀವಿ ಬೆಂಬಲ ನೀಡುವುದಾದರೆ, ಸರಕಾರಕ್ಕೆ ಧಕ್ಕೆಯಾಗದು ಎಂದು ಹೈಕಮಾಂಡ್ ಹೇಳಿದ ಬಳಿಕವಷ್ಟೇ ದೆಹಲಿಯಲ್ಲಿರುವ ಕಿರಣ್ ಕುಮಾರ್ ರೆಡ್ಡಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಚಿರಂಜೀವಿ ಕೂಡ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಹೈದರಾಬಾದ್‌ಗೆ ವಾಪಸ್ಸಾದ ಮೇಲೆ ವಿಸ್ತೃತ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಈ ನಡುವೆ ಜಗನ್‌ ರೆಕ್ಕೆಗಳನ್ನು ಕತ್ತರಿಸುವ ಯತ್ನಗಳು ಕೂಡ ನಡೆಯುತ್ತಿವೆ. ವೈಎಸ್ಆರ್ ಸಹೋದರ ವಿವೇಕಾನಂದ ರೆಡ್ಡಿಯವರನ್ನು ನೂತನ ಸಂಪುಟಕ್ಕೆ ಸೇರ್ಪಡೆಗೊಳಿಸಿ, ಉನ್ನತ ಸಚಿವ ಸ್ಥಾನವನ್ನು ನೀಡುವುದು; ಸ್ವತಃ ಜಗನ್ ಬೆಂಬಲಿಗರಿಗೆ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಸ್ಥಾನ ಕೊಡಿಸಿ ಬಂಡಾಯ ನಾಯಕನನ್ನು ದುರ್ಬಲಗೊಳಿಸಲು ಯೋಜನೆ ರೂಪಿಸಲಾಗಿದೆ.

ನಂಬರ್ ಲೆಕ್ಕಾಚಾರ?
ಆಂಧ್ರಪ್ರದೇಶ ವಿಧಾನಸಭೆಯು 294 ಸದಸ್ಯ ಬಲವನ್ನು ಹೊಂದಿದ್ದು, ಸರಕಾರಕ್ಕೆ ಬೇಕಾಗಿರುವುದು 147 ಸದಸ್ಯರ ಬೆಂಬಲ. ಪ್ರಸಕ್ತ ಕಾಂಗ್ರೆಸ್ ಹೆಚ್ಚುಕಡಿಮೆ 156 ಸ್ಥಾನಗಳನ್ನು ಹೊಂದಿದೆ. ಪ್ರಜಾರಾಜ್ಯ ಹೊಂದಿರುವ ಶಾಸಕರ ಸಂಖ್ಯೆ 18.

ಹಾಗಾಗಿ ಸುಮಾರು 30ರಷ್ಟು ಕಾಂಗ್ರೆಸ್ ಶಾಸಕರು ಜಗನ್ ಹಿಂದೆ ಹೋದರೂ, ಚಿರಂಜೀವಿ ಬೆಂಬಲ ನೀಡಿದರೆ ಸರಕಾರಕ್ಕೆ ಯಾವುದೇ ಧಕ್ಕೆಯಾಗದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಇದಕ್ಕೆ ಪೂರಕವಾಗಿ ಪಕ್ಷೇತರ ಶಾಸಕರ ಬೆಂಬಲ ಪಡೆಯುವ ಚಿಂತನೆಯೂ ಕಾಂಗ್ರೆಸ್ ವಲಯದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ