ವಿಮಾನಯಾನ ಸಂಸ್ಥೆ ಆರಂಭಕ್ಕಾಗಿ ಸಚಿವರೊಬ್ಬರು ಲಂಚ ಕೇಳಿದ್ದರು ಎಂದು ಉದ್ಯಮಿ ರತನ್ ಟಾಟಾ ಬಾಂಬ್ ಹಾಕಿದ ಬೆನ್ನಿಗೆ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಕೂಡ ತನಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ದೆಹಲಿ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯೊಂದಕ್ಕಾಗಿ ಅಧಿಕಾರಿಯೊಬ್ಬರು ಲಂಚ ಕೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಇದು ನಡೆದಿರುವುದು 1992ರಲ್ಲಿ. ಮಿಜೋರಾಂ ಡಿಐಜಿ ಅವಧಿ ಮುಗಿಸಿದ್ದ ಬೇಡಿಯವರು ದೆಹಲಿ ಡಿಐಜಿಯಾಗಲು ಬಯಸಿದ್ದರು. ಆದರೆ ಅದಕ್ಕಾಗಿ ಆರು ಲಕ್ಷ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಸರಕಾರದ ಪ್ರಮುಖ ಅಧಿಕಾರಿಯೊಬ್ಬರು ಬೇಡಿಕೆ ಮುಂದಿಟ್ಟಿದ್ದರು.
ಆದರೆ ನಾನು ಆತನಿಗೆ ಲಂಚ ನೀಡಲು ನಿರಾಕರಿಸಿದ್ದೆ. ಅಲ್ಲದೆ ನೀನೇ ಹಣ ಪ್ರಿಂಟ್ ಮಾಡಿಕೊಂಡು, ಅದನ್ನೇ ತೆಗೆದುಕೋ ಎಂದು ಹೇಳಿದ್ದೆ. ಇದೇ ಕಾರಣದಿಂದ ನನ್ನನ್ನು ಒಂಬತ್ತು ತಿಂಗಳ ಕಾಲ ಯಾವುದೇ ಹುದ್ದೆಗೂ ನೇಮಿಸದೆ ತ್ರಿಶಂಕು ಸ್ಥಿತಿಯಲ್ಲಿಟ್ಟಿದ್ದರು. ಕೊನೆಗೂ ನನ್ನನ್ನು ನಿಯೋಜಿಸಿದ್ದು ತಿಹಾರ ಜೈಲಿಗೆ ಎಂದು ಅವರು ವಿವರಣೆ ನೀಡಿದರು.
ಇತ್ತೀಚೆಗಷ್ಟೇ ರತನ್ ಟಾಟಾ ಅವರು ಕೂಡ ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದರು. ಹಲವು ವರ್ಷಗಳ ಹಿಂದೆಯೇ ತಾನು ವಿಮಾನ ಯಾನ ಸಂಸ್ಥೆಯನ್ನು ಹುಟ್ಟು ಹಾಕಬೇಕೆಂದು ಬಯಸಿದ್ದೆ. ಆದರೆ ಅದಕ್ಕಾಗಿ ಸಚಿವರೊಬ್ಬರು 15 ಕೋಟಿ ರೂಪಾಯಿಗಳ ಲಂಚ ಕೇಳಿದ್ದರು. ಇದಕ್ಕೆ ಇಷ್ಟವಿಲ್ಲದೆ ನಾನು ಯೋಜನೆಯನ್ನೇ ಕೈಬಿಟ್ಟಿದ್ದೆ ಎಂದು ಅವರು ಹೇಳಿದ್ದರು.
ಕಾರ್ಯಕ್ರಮದುದ್ದಕ್ಕೂ ಬೇಡಿಯವರು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆದರೂ ತನ್ನಲ್ಲಿ ಲಂಚ ಕೇಳಿದ ವ್ಯಕ್ತಿಯ ಹೆಸರು ಅಥವಾ ಯಾವ ಹುದ್ದೆಯ ಅಧಿಕಾರಿ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಅದೇ ಹೊತ್ತಿಗೆ ದೇಶದ ಬೃಹತ್ ಹಗರಣಗಳಿಗೆ ಕಾರ್ಪೊರೇಟ್ ವ್ಯಕ್ತಿಗಳೇ ಕಾರಣ ಎಂದು ಬೇಡಿ ದೂಷಿಸಿದ್ದಾರೆ.
'ಕಂಪನಿಗಳು ಸರಕಾರವನ್ನು ಭ್ರಷ್ಟಗೊಳಿಸುತ್ತಿವೆ. ಈ ಯುವ ಪ್ರತಿಭಾವಂತ ಮತ್ತು ವಿದ್ಯಾವಂತ ಅಧಿಕಾರಿಗಳು ಲಂಚ ಸ್ವೀಕರಿಸಲು ಯಾಕೆ ಮುಂದಾಗುತ್ತಾರೆ ಎಂಬುದನ್ನು ಅಧ್ಯಯನ ನಡೆಯಸಬೇಕು ಎಂದು ಶೈಕ್ಷಣಿಕ ಸಂಸ್ಥೆಗಳಿಗೆ ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತಿದ್ದೇನೆ. ಜತೆಗೆ ಅಧಿಕಾರಿಗಳು ತಾವು ನಿವೃತ್ತಿಯಾಗುವವರೆಗೆ ಯಾಕೆ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತುವುದಿಲ್ಲ ಎನ್ನುವುದೂ ಅಧ್ಯಯನ ಮಾಡಬೇಕಾದ ವಿಚಾರ' ಎಂದರು.