ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೂ ಜಗನ್ ಗುಡ್‌ಬೈ; YSR ಕಾಂಗ್ರೆಸ್ ಸ್ಥಾಪನೆ (Jagan Mohan Reddy | Congress | Andhra Pradesh | Sonia Gandhi)
Bookmark and Share Feedback Print
 
ಕಡಪ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರು ಕಾಂಗ್ರೆಸ್‌ಗೂ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಅವರು 'ವೈಎಸ್ಆರ್ ಕಾಂಗ್ರೆಸ್' ಪಕ್ಷವನ್ನು ಅಸ್ತಿತ್ವಕ್ಕೆ ತರಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದರೊಂದಿಗೆ ಆಂಧ್ರಪ್ರದೇಶ ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎದ್ದಿದೆ.

ಕಾಂಗ್ರೆಸ್‌ನೊಳಗೆ ತನ್ನ ವಿರುದ್ಧ ಕೆಲಸ ಮಾಡುವವರು ಹೆಚ್ಚಾಗಿದ್ದಾರೆ, ನನ್ನ ವಿರುದ್ಧದ ರಾಜಕೀಯ ಮಿತಿ ಮೀರುತ್ತಿದೆ. ಇದನ್ನು ಸಹಿಸಿಕೊಂಡು ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ರವಾನಿಸಿರುವ ರಾಜೀನಾಮೆ ಕುರಿತ ನಾಲ್ಕು ಪುಟಗಳ ಪತ್ರದಲ್ಲಿ ಜಗನ್ ತಿಳಿಸಿದ್ದಾರೆ.

ನಾನು ಲೋಕಸಭೆ ಮತ್ತು ಕಾಂಗ್ರೆಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಳೆದ 14 ತಿಂಗಳ ಅವಧಿಯಲ್ಲಿ ಎಐಸಿಸಿ ನನ್ನನ್ನು ಸಾಕಷ್ಟು ಬಾರಿ ಅವಮಾನಿಸಿದೆ. ನನಗೆ ಸಿಗಬೇಕಾದ ಗೌರವ ನನಗೆ ಸಿಕ್ಕಿಲ್ಲ. ನನ್ನ ತಂದೆಯ ಜನಪ್ರಿಯತೆಯನ್ನು ಇತರರು ಹೈಜಾಕ್ ಮಾಡಿದ ಹೊತ್ತಿನಲ್ಲಿ ಕೈಗೊಂಡ ಒದಾರ್ಪು ಯಾತ್ರೆಯನ್ನು ಮುಂದುವರಿಸಲು ಕೂಡ ಅವಕಾಶ ನೀಡಲಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಹೊಸ ಪಕ್ಷ ವೈಎಸ್ಆರ್ ಸ್ಥಾಪನೆ...
ಕಾಂಗ್ರೆಸ್‌ ತೊರೆದಿರುವ ಜಗನ್ ಇದೀಗ ಹೊಸ ಪಕ್ಷವೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಈ ಪಕ್ಷಕ್ಕೆ ವೈಎಸ್ಆರ್ ಕಾಂಗ್ರೆಸ್ ಎಂದು ಹೆಸರಿಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ವೈಎಸ್ಆರ್ ಎಂದರೆ ವೈಎಸ್ ರಾಜಶೇಖರ ರೆಡ್ಡಿ. ಆದರೆ ಇಲ್ಲಿ ಮತ್ತೊಂದು ಅರ್ಥವನ್ನೂ ನೀಡಲಾಗುತ್ತದೆ. ಯೂತ್ ಶ್ರಮಿಕ್ ರೈತ್ ಕಾಂಗ್ರೆಸ್ ಎಂದು ಹೆಸರಿಡಲಾಗುತ್ತದೆ ಎಂದು ಹೇಳಲಾಗಿದೆ.

ಜಗನ್ ನಡೆಗೆ ಕಾರಣಗಳು...
ಜಗನ್ ಕಾಂಗ್ರೆಸ್ ತೊರೆಯುವಂತಹ ನಿರ್ಧಾರಕ್ಕೆ ಬರಲು ಹಲವು ಕಾರಣಗಳಿವೆ. ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ನಂತರ ಮುಖ್ಯಮಂತ್ರಿ ಪದವಿಯ ಮೇಲೆ ಜಗನ್ ಕಣ್ಣಿಟ್ಟಿದ್ದರಾದರೂ, ಅನುಭವದ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ನಿರಾಕರಿಸಿತ್ತು. ರೋಸಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.

ಮುಖ್ಯಮಂತ್ರಿ ಪದವಿಯತ್ತ ಆತುರ ಪಡುತ್ತಿದ್ದ ಜಗನ್ ಇದರಿಂದ ತೀವ್ರ ನಿರಾಸೆಗೊಂಡಿದ್ದರು. ಇದರ ಜತೆ ವೈಎಸ್ಆರ್ ವಿರೋಧಿಗಳು ಬಲಗೊಂಡು, ಜಗನ್ ವಿರುದ್ಧ ಕತ್ತಿ ಮಸೆಯಲು ಆರಂಭಿಸಿದ್ದರು. ಇವೆಲ್ಲದಕ್ಕೂ ತಕ್ಷಣದ ಪ್ರತಿಕ್ರಿಯೆ ನೀಡುತ್ತಿದ್ದ ಜಗನ್, ತಂದೆಯ ಜನಪ್ರಿಯತೆಯ ಲಾಭವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ತಂತ್ರ ರೂಪಿಸಿದರು.

ಅದರಂತೆ ವೈಎಸ್ಆರ್ ಸಾವಿನ ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿರುವ ಅಭಿಮಾನಿಗಳ ಮನೆಗೆ ಭೇಟಿ ನೀಡುವ ಒದಾರ್ಪು ಯಾತ್ರೆಗೆ ಚಾಲನೆ ನೀಡಿದರು. ಕಾಂಗ್ರೆಸ್ ಹೈಕಮಾಂಡ್ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಜಗನ್ ಹಿಂದಕ್ಕೆ ಸರಿಯಲಿಲ್ಲ.

ಅತ್ತ ಮುಖ್ಯಮಂತ್ರಿ ರೋಸಯ್ಯಗೂ ಪರೋಕ್ಷವಾಗಿ ಜಗನ್ ಕಿರುಕುಳ ನೀಡುತ್ತಿದ್ದರು. ಈ ನಡುವೆ ಜಗನ್ ಮಾಲಕತ್ವದ ಸಾಕ್ಷಿ ಸುದ್ದಿವಾಹಿನಿಯು ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್, ನೊಟೀಸ್ ಕೂಡ ಜಾರಿ ಮಾಡಿತ್ತು.

ಈ ಹೊತ್ತಿಗೆ ರೋಸಯ್ಯ ತನ್ನ ರಾಜೀನಾಮೆಯನ್ನು ಪ್ರಕಟಿಸಿದರು. ಆದರೆ ಆ ಹೊತ್ತಲ್ಲೂ ಜಗನ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಪರಿಗಣಿಸದೆ, ಕಿರಣ್ ಕುಮಾರ್ ರೆಡ್ಡಿಯವರನ್ನು ಸಿಎಂ ಮಾಡಿದ್ದು ಮತ್ತೊಮ್ಮೆ ಕಿಚ್ಚು ಹತ್ತಿಸಿತು.

ಇವೆಲ್ಲದರ ಒಟ್ಟು ಪರಿಣಾಮ ಜಗನ್ ಕಾಂಗ್ರೆಸ್ ತೊರೆದು ತನ್ನದೇ ಸ್ವಂತ ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇದಕ್ಕೆ ಅವರ ಕುಟುಂಬವೂ ಬೆಂಬಲ ನೀಡಿದೆ. ತಾಯಿ ವಿಜಯಲಕ್ಷ್ಮಿಯವರು ತನ್ನ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ