ಜಮ್ಮು-ಕಾಶ್ಮೀರದಲ್ಲಿ ಸೋಮವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಉಗ್ರರು ಮತ್ತು ಒಬ್ಬ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಶ್ರೀನಗರದ ಲಾಲ್ ಚೌಕ್‌ನಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ ಕಾಮರವಾರಿ ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಜಟುವಟಿಕೆ ಕುರಿತು ಖಚಿತ ಮಾಹಿತಿಗಳು ಪೊಲೀಸರಿಗೆ ಬಂದ ನಂತರ ಕಾರ್ಯಾಚರಣೆ ನಡೆಸಲಾಗಿತ್ತು.
ಪ್ರತ್ಯೇಕ ಬೈಕಿನಲ್ಲಿ ಬಂದಿದ್ದ ಮೂವರು ಶಂಕಿತ ಉಗ್ರರು, ಮುಖ್ಯ ಪೇದೆಗೆ ಬೈಕ್ ನಿಲ್ಲಿಸುವಂತೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಪೇದೆ ಸಾವನ್ನಪ್ಪಿದರು. ಆದರೆ ಅವರ ಜತೆಗಿದ್ದ ಮತ್ತೊಬ್ಬ ಪೊಲೀಸ್ ಉಗ್ರರತ್ತ ಗುಂಡು ಹಾರಿಸಿದ್ದರು.
ಮೂವರು ಉಗ್ರರು ಕೂಡ ಇದೇ ಸಂದರ್ಭದಲ್ಲಿ ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಜತೆಗಿದ್ದ ಪೊಲೀಸ್ ಸಿಬ್ಬಂದಿ ಬಲಿಯಾದ ಹೊರತಾಗಿಯೂ ಮತ್ತೊಬ್ಬ ಸಮಯೋಚಿತವಾಗಿ ಭಯೋತ್ಪಾದಕರತ್ತ ಗುಂಡು ಹಾರಿಸಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ.
ಘಟನೆ ನಡೆದಿರುವ ಪ್ರದೇಶವನ್ನು ಪ್ರತಿಬಂಧಿಸಲಾಗಿದೆ. ಸಾವನ್ನಪ್ಪಿದ ಉಗ್ರರ ಗುರುತು ಹಿಡಿಯುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಸ್ಥಳದಿಂದ ಎರಡು ಪಿಸ್ತೂಲು ಮತ್ತು ಐದು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.