ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಕಚೇರಿಗಳ ಮೇಲೆ ಜಗನ್ ಬೆಂಬಲಿಗರ ದಾಳಿ (Congress | Andhra Pradesh | YSR | YS Jaganmohan Reddy)
Bookmark and Share Feedback Print
 
ಸಂಸತ್ ಸದಸ್ಯ ಸ್ಥಾನ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬೆನ್ನಿಗೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಬೆಂಬಲಿಗರು ಆಂಧ್ರಪ್ರದೇಶದಾದ್ಯಂತ ಕಾಂಗ್ರೆಸ್‌ನ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ದಾಂಧಲೆ ಎಬ್ಬಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಪುತ್ರ ಸೋಮವಾರ ಬೆಳಿಗ್ಗೆ ರಾಜೀನಾಮೆ ಪ್ರಹಸನ ಆರಂಭಿಸಿದ್ದರು. ಇದರ ಬೆನ್ನಿಗೆ ರಾಜ್ಯದಾದ್ಯಂತ ಜಗನ್ ಅಭಿಮಾನಿಗಳು ಪ್ರತಿಭಟನೆ ಆರಂಭಿಸಿದ್ದರು. ಜಗನ್ ಪ್ರತಿನಿಧಿಸುತ್ತಿದ್ದ ಕಡಪ ಲೋಕಸಭಾ ಕ್ಷೇತ್ರ, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಇಲ್ಲಿ ಕಾಂಗ್ರೆಸ್‌ನ ಎರಡನೇ ಹಂತದ ಹಲವು ನಾಯಕರು ರಾಜೀನಾಮೆ ನೀಡಿರುವ ಬಗ್ಗೆಯೂ ವರದಿಗಳು ಬಂದಿವೆ.

ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಅಭಿಮಾನಿಗಳು ಅನಂತಪುರದ ಕಾಂಗ್ರೆಸ್ ಕಚೇರಿಗೆ ದಾಳಿ ನಡೆಸಿದ್ದಾರೆ. ಕಡಪದಲ್ಲಿ ರಾಜಶೇಖರ ರೆಡ್ಡಿ ಮತ್ತು ಜಗನ್ ಚಿತ್ರಗಳನ್ನು ತಲೆ ಮೇಲೆ ಹೊತ್ತು ಸಾಗಿದ ಗುಂಪೊಂದು ಇಲ್ಲಿನ ಕಾಂಗ್ರೆಸ್ ಕಚೇರಿಗೆ ಹಾನಿ ಮಾಡಿದೆ. ಇಲ್ಲಿ ಸೋನಿಯಾ ಗಾಂಧಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುತ್ತಿದ್ದರು.

ಯುವ ನಾಯಕರ ಬೆಂಬಲಿಗರು ತಿರುಪತಿಯಲ್ಲಿ ಕೂಡ ದಾಂಧಲೆ ಎಬ್ಬಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿನ ಜಗನ್ ನಿವಾಸದೆದುರು ಜಮಾವಣೆಗೊಂಡ ಸಾವಿರಾರು ಬೆಂಬಲಿಗರು, ಮಾಜಿ ಸಂಸದನ ನಡೆಗೆ ಸಂಪೂರ್ಣ ಬೆಂಬಲ ಘೋಷಿಸಿದರು. ಜಗನ್ ಪರ ಹಾಗೂ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ವಿರುದ್ಧ ಈ ಸಂದರ್ಭದಲ್ಲಿ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು.

ಜಗನ್ ಬಾಲ್ಕನಿಗೆ ಬಂದು, ಜನಸಂದಣಿಯತ್ತ ಕೈ ಬೀಸುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಹೋ ಎಂದು ಕೂಗಿದರು.

ಕಡಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಜಗನ್‌ಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಸಮಿತಿಗಳ ನೂರಾರು ಮಂದಿ ಜಗನ್‌ಗೆ ಬೆಂಬಲ ಸೂಚಿಸಿ, ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕಡಪ ಲೋಕಸಭಾ ಸದಸ್ಯ ಸ್ಥಾನಕ್ಕೆ ಜಗನ್ ಹಾಗೂ ವೈಎಸ್ಆರ್ ಪತ್ನಿ ವಿಜಯಲಕ್ಷ್ಮಿ ತನ್ನ ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನಂತರ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಗನ್, ಕಾಂಗ್ರೆಸ್ ತಮ್ಮ ಕುಟುಂಬಕ್ಕೆ ಸಾಕಷ್ಟು ಅನ್ಯಾಯ ಮಾಡಿದೆ. ಅಪಮಾನ ಎಸಗಿದೆ ಎಂದು ದೂರಿದ್ದರು. ಅಲ್ಲದೆ ಸೋನಿಯಾ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದರು.

ಸರಕಾರ ಅಸ್ಥಿರ ಬೇಡ: ಶಾಸಕರು
ಜಗನ್ ರಾಜೀನಾಮೆಯಿಂದ ಆಂಧ್ರಪ್ರದೇಶ ಕಾಂಗ್ರೆಸ್‌ನಲ್ಲಿ ಬಿರುಗಾಳಿಯೆದ್ದಿದ್ದು, ಸರಕಾರ ಪತನಗೊಳ್ಳುವ ಸಾಧ್ಯತೆಗಳಿವೆ. ಈ ನಡುವೆ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕರು, ಆಂಧ್ರ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಗನ್ ಬೆಂಬಲಿಗ ಶಾಸಕರು ಕಾಂಗ್ರೆಸ್‌ನಿಂದ ಜಗನ್ ಕಡೆಗೆ ವಾಲಿದರೆ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆದರೆ ಇದಕ್ಕೆ ಕನಿಷ್ಠ 27ಕ್ಕಿಂತ ಹೆಚ್ಚು ಶಾಸಕರು ಮುಂದಾಗಬೇಕು. ಈ ಹೊತ್ತಿನಲ್ಲಿ ಚಿರಂಜೀವಿಯವರ 18 ಶಾಸಕರ ಬೆಂಬಲವಿದ್ದರೂ, 27ಕ್ಕಿಂತ ಹೆಚ್ಚು ಕಾಂಗ್ರೆಸ್ ಶಾಸಕರು ಜಗನ್ ಪರ ಒಲವು ವ್ಯಕ್ತಪಡಿಸಿದರೆ ಸರಕಾರ ಪತನ ಖಚಿತ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ