ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳು ಅನುಸರಿಸುತ್ತಿರುವ ಧರ್ಮ ಯಾವುದು ಎಂದು ಪ್ರಶ್ನೆ ಕೇಳುವಂತಿಲ್ಲ. ಅದು ಅವರ ಖಾಸಗಿತನವನ್ನು ಭಂಗ ಮಾಡುವ ಯತ್ನ. ಇಂತಹ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ಹೇಳಿದೆ.
ಭಾರತೀಯರಿಗೆ ತಿಳಿದಿರುವಂತೆ ಸೋನಿಯಾ ಗಾಂಧಿ (ಎಡ್ವಿಗ್ ಅಂಟೋನಿಯಾ ಅಲ್ಬಿನಾ ಮೈನೋ) ರೋಮನ್ ಕ್ಯಾಥೊಲಿಕ್. ಆದರೂ ಅವರು ಕೇವಲ ಕ್ರೈಸ್ತ ಧರ್ಮವನ್ನು ಮಾತ್ರ ಅನುಸರಿಸದೆ, ಹಿಂದೂ ಮತ್ತಿತರ ಧರ್ಮಗಳನ್ನೂ ಅನುಸರಿಸುವುದು ಅಥವಾ ಗೌರವಿಸುವುದನ್ನು ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ಸ್ಪಷ್ಟತೆಯನ್ನು ಅರ್ಜಿದಾರನೊಬ್ಬ ಬಯಸಿದ್ದ.
PTI
ಹರ್ಯಾಣದ ಮಾಜಿ ಡಿಜಿಪಿ ಪಿ.ಸಿ. ವಾದ್ವಾ ಎಂಬಾತನೇ ಈ ಅರ್ಜಿ ಸಲ್ಲಿಸಿರೋದು. ಸೋನಿಯಾ ಮತ್ತು ಅವರ ಮಕ್ಕಳು ಕಳೆದ ಜನಗಣತಿ ವೇಳೆ ಪಾಲಿಸುತ್ತಿದ್ದ ಧರ್ಮ ಯಾವುದು ಎಂದು ರಿಜಿಸ್ಟ್ರಾರ್ ಜನರಲ್ ಕಚೇರಿಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಿಐಒ) ಕೇಳಲಾಗಿತ್ತು. ಈ ಕಚೇರಿ ಕೇಂದ್ರ ಗೃಹ ಸಚಿವಾಲಯದ ಗಣತಿ ಕಾರ್ಯದ ಅಡಿಯಲ್ಲಿ ಬರುತ್ತದೆ.
ಮಾಜಿ ಡಿಜಿಪಿಯ ಅರ್ಜಿಯನ್ನು ಸಿಐಒ ಅಧಿಕಾರಿ ತಿರಸ್ಕರಿಸಿದ್ದರು. ಇಷ್ಟಕ್ಕೆ ಬಿಡದ ವಾದ್ವಾ ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.
ಸೋನಿಯಾ ಮತ್ತು ಅವರ ಕುಟುಂಬದ ಸದಸ್ಯರು ಸಾರ್ವಜನಿಕ ವ್ಯಕ್ತಿಗಳಾಗಿರುವುದರಿಂದ, ಅವರು ಅನುಸರಿಸುತ್ತಿರುವ ಧರ್ಮ ಯಾವುದೆಂದು ತಿಳಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಅವರು ವಾದಿಸಿದ್ದರು.
ಆದರೆ ಕೇಂದ್ರ ಮಾಹಿತಿ ಆಯೋಗವು ಇದನ್ನು 2008ರಲ್ಲಿ ತಳ್ಳಿ ಹಾಕಿತ್ತು. ಇದರ ವಿರುದ್ಧ ಮಾಜಿ ಡಿಜಿಪಿ ವಾದ್ವಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲೂ ಸೋಲಾಗಿದೆ.
ಅರ್ಜಿಯಲ್ಲಿ ಮಾಹಿತಿ ಕೇಳಿರುವ ವ್ಯಕ್ತಿಗಳು ಸಾರ್ವಜನಿಕ ವ್ಯಕ್ತಿಗಳಾಗಿದ್ದರೂ, ಅವರ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಲಾಗದು. ವ್ಯಕ್ತಿಗಳ ಖಾಸಗಿತನವನ್ನು ಭಂಗ ಮಾಡುವ ಯತ್ನ ಅರ್ಜಿದಾರರಲ್ಲಿ ಕಾಣುತ್ತಿದೆ ಎಂದು ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಮತ್ತು ರಂಗನ್ ಗಗೋಯಿ ಅವರನ್ನೊಳಗೊಂಡ ಪೀಠವು ಕೇಂದ್ರ ಮಾಹಿತಿ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದಿದೆ.