ಇವನು ಕಾಮಿಸ್ವಾಮಿ ನಿತ್ಯಾನಂದನ ಶಿಷ್ಯನಲ್ಲ, ಆದರೆ ಪರಾಕ್ರಮಗಳಲ್ಲಿ ಆತನಿಗಿಂತ ಯಾವುದರಲ್ಲೂ ಕಡಿಮೆಯಲ್ಲ. ಒಂದೇ ಮನೆಯ ತಾಯಿ-ಮಕ್ಕಳು ಸೇರಿದಂತೆ ನಾಲ್ವರು ಮಹಿಳೆಯರು ಮತ್ತು ಇತರ ಕುಟುಂಬಗಳ ಕನಿಷ್ಠ ಮೂವರ ಜತೆ ಮೂಢನಂಬಿಕೆಗಳ ಹೆಸರಿನಲ್ಲಿ ನಿರಂತರ ಲೈಂಗಿಕ ನಡೆಸಿ, ಗರ್ಭಪಾತ ನಡೆಸಿರುವ ಇತಿಹಾಸ ಹೊಂದಿದ್ದಾನೀತ.
ನಿಮ್ಮ ಕೇಡುಗಾಲವನ್ನು ದೂರ ಮಾಡುತ್ತೇನೆ. ಮುಂದೆ ನಿಮ್ಮ ಜೀವನ ಉಜ್ವಲವಾಗುತ್ತದೆ ಎಂದೆಲ್ಲಾ ಹೇಳಿ ದಕ್ಷಿಣ ಮುಂಬೈಯ ಕೊಲಾಬಾದ ಒಂದೇ ಮನೆಯ ಐವರು ಮಹಿಳೆಯರ ಮೈಂಡ್‌ವಾಶ್ ಮಾಡಿದ್ದ. ಬಳಿಕ ಹಿಪ್ನೋಟೈಸ್‌ಗೊಳಪಡಿಸಿ ನಾಲ್ವರ ಜತೆ ಅಕ್ರಮ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ರೀತಿಯ ಅತ್ಯಾಚಾರಕ್ಕೊಳಗಾದವರು ತಾಯಿ-ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಮಕ್ಕಳು ಗರ್ಭಿಣಿಯರಾದಾಗ ಅಬಾರ್ಷನ್ ಕೂಡ ಮಾಡಿಸಿದ್ದಾನೆ.
ಇವೆಷ್ಟೇ ಅಲ್ಲ. ಮುಂಬೈಯ ಹಲವೆಡೆ ಈತನ ಪರಾಕ್ರಮಗಳು ಪಸರಿಸಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೂ ಇತ್ತೀಚಿನ ಮಾಹಿತಿಗಳ ಪ್ರಕಾರ ಕನಿಷ್ಠ ಮೂವರು ಇತರ ಅಪ್ರಾಪ್ತ ಯುವತಿಯರು ಇದೇ ರೀತಿ ಮೋಸ ಹೋಗಿದ್ದಾರೆ. ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಕಲಿ ಬಾಬಾ, ಮಂತ್ರವಾದಿ, ವೈದ್ಯನ ಹೆಸರು ಮೆಹೆಂದಿ ಹಸನ್ ಆಲಿಯಾಸ್ ಜಾವೇದ್ ನದೀಂ ಕದೀಂ. ವಯಸ್ಸು 46. ಎಲ್ಲಾ ದುಷ್ಟಶಕ್ತಿಗಳನ್ನು ತನ್ನ ಮಂತ್ರಶಕ್ತಿಯ ಮೂಲಕ ತೊಡೆದು ಹಾಕುವ ಶಕ್ತಿ ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಆಷಾಢಭೂತಿ. ಮೂಲತಃ ಪಶ್ಚಿಮ ಬಂಗಾಲದವನಾದ ಈತ ವಿವಾಹಿತನಾಗಿದ್ದು, ಇಬ್ಬರು ಮಕ್ಕಳನ್ನೂ ಹೊಂದಿದ್ದಾನೆ.
ಬಾಬಾನ ಕರ್ಮಕಾಂಡಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜೆ.ಜೆ. ಮಾರ್ಗ್ ಪೊಲೀಸರು ಬಂಧಿಸಿದ್ದಾರೆ. ಅವರೇ ಹೇಳುವ ಮಾಹಿತಿಗಳ ಪ್ರಕಾರ, ಕಳೆದ ವರ್ಷದ ಮೇ ತಿಂಗಳಿಂದ ಒಂದೇ ಕುಟುಂಬದ ನಾಲ್ವರ ಜತೆ ಆತ ಸೆಕ್ಸ್ ನಡೆಸುತ್ತಾ ಬಂದಿದ್ದಾನೆ. ಅವರಲ್ಲಿ ಓರ್ವ ವಿವಾಹಿತ ಮಹಿಳೆ, ಆಕೆಯ ಸಹೋದರಿ, ಇಬ್ಬರು ಮಗಳಂದಿರು ಮತ್ತು ಅವರ ಮನೆ ಕೆಲಸದಾಕೆಯನ್ನು ಇದಕ್ಕಾಗಿ ಬಾಬಾ ಬಲಿಪಶು ಮಾಡಿದ್ದಾನೆ.
ಈ ಐವರು ಮಹಿಳೆಯರು ಮತ್ತು ಇತರ ಮೂವರು ಅಪ್ರಾಪ್ತ ಬಾಲಕಿಯರು, ಹಸನ್ ಬಾಬಾ ನೀಡಿರುವ ಚಿತ್ರಹಿಂಸೆ, ಲೈಂಗಿಕ ಕಿರುಕುಳವನ್ನು ಪೊಲೀಸ್ ಠಾಣೆಯಲ್ಲಿ ಸ್ವತಃ ಹಾಜರಾಗಿ ವಿವರಣೆ ನೀಡಿದ್ದಾರೆ.
ಕನಿಷ್ಠ ಐವರಿಗೆ ಗರ್ಭಪಾತ... ಮೋಸಕ್ಕೊಳಗಾದ ಐವರು ಮಹಿಳೆಯರು ಮಧ್ಯಮ ವರ್ಗದವರು. ಕೊಲಾಬಾದಲ್ಲಿನ ಸ್ಥಿತಿವಂತರು. ಇಬ್ಬರು ಮಕ್ಕಳು ದಕ್ಷಿಣ ಮುಂಬೈಯಲ್ಲಿನ ಜನಪ್ರಿಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರು. ಅವರಲ್ಲೊಬ್ಬಳಿಗೆ ಕೇವಲ 17ರ ವಯಸ್ಸು. ಮತ್ತೊಬ್ಬಳು ದ್ವಿತೀಯ ವರ್ಷದ ಬಿ.ಎ. ಓದುತ್ತಿದ್ದಾಳೆ.
ಈ ಹುಡುಗಿಯರಿಬ್ಬರೂ ಗರ್ಭಿಣಿಯರಾಗಿರುವುದು ಇದೇ ತಿಂಗಳ ಆರಂಭದಲ್ಲಿ ಹಸನ್ ಗಮನಕ್ಕೆ ಬಂದಿತ್ತು. ಇದರಿಂದ ಆತಂಕಗೊಂಡಿದ್ದ ಆರೋಪಿ, ಅವರಿಬ್ಬರನ್ನೂ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಕೆಲ ದಿನಗಳ ನಂತರ ಮತ್ತೊಂದು ಕಡೆಯಿಂದ ಮೂವರು ಅಪ್ರಾಪ್ತ ಯುವತಿಯರನ್ನು ಇಲ್ಲೇ ಕರೆ ತಂದು ಅಬಾರ್ಷನ್ ಮಾಡಿಸಿದ್ದಾನೆ.
ತಂದೆಯಿಲ್ಲದ ಮನೆ ಹುಡುಕುತ್ತಿದ್ದ... ಈತ ಇಂತಹ ಚಟುವಟಿಕೆಗಳನ್ನು ನಡೆಸಲು ಆರಿಸುತ್ತಿದ್ದುದು ತಂದೆಯಿಲ್ಲದ ಮನೆ ಅಥವಾ ತಂದೆ ದೂರದ ಊರಿನಲ್ಲಿ ಕೆಲಸ ಮಾಡುತ್ತಿರುವವರ ಮನೆಗಳನ್ನು. ಕೊಲಾಬಾದ ಈ ಕುಟುಂಬವನ್ನು ಬಾಬಾನಿಗೆ ಪರಿಚಯಿಸಿದ್ದು ಮನೆ ಕೆಲಸದಾಕೆ.
2009ರ ಮೇ ತಿಂಗಳಲ್ಲಿ ಈ ಕುಟುಂಬದ ಸಂಪರ್ಕ ಬೆಳೆಸಿದ್ದ ಬಾಬಾ, ಆರಂಭದಲ್ಲಿ ಪೂಜೆ-ಪುನಸ್ಕಾರದ ನೆಪದಲ್ಲಿ ಮನೆಗೆ ಆಗಾಗ ಬರುತ್ತಿದ್ದ. ಈ ಸಂದರ್ಭದಲ್ಲಿ ಕೆಂಪು ಬಣ್ಣದ ತೀರ್ಥವನ್ನು ಹೆಣ್ಮಕ್ಕಳಿಗೆ ಆತ ನೀಡುತ್ತಿದ್ದ. ಇದು ಮಾದಕ ಪೇಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಳಿಕ ಅವರನ್ನು ತಾನು ತಂಗಿರುವ ಸೆಂಟ್ರಲ್ ಮುಂಬೈ ಅತಿಥಿ ಗೃಹಕ್ಕೆ ಕರೆಸಿ, ಹಿಪ್ನಾಟೈಸ್ ಮಾಡಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ. ಇದನ್ನು ಬಹಿರಂಗಗೊಳಿಸಿದ್ದೇ ಆದರೆ, ಜೀವಂತವಾಗಿ ನೀವು ಉಳಿಯುವುದಿಲ್ಲ ಎಂದು ಬೆದರಿಕೆಯನ್ನೂ ಹಾಕುತ್ತಿದ್ದ. ಹಾಗಾಗಿ ಇದ್ಯಾವುದೂ ಕೂಡ ಮಕ್ಕಳ ಹೆತ್ತವರಿಗೆ ತಿಳಿಯುತ್ತಿರಲಿಲ್ಲ.