ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಕಾಂಟ್ರಾಕ್ಟ್ ಕಿಲ್ಲರ್, ದಾಳಿ ಪಿತೂರಿ ನನ್ನದಲ್ಲ: ಕಸಬ್ (Pakistan | Ajmal Kasab | Amin Solkar | Mumbai attacks)
Bookmark and Share Feedback Print
 
ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ರೂಪಿಸಿದ್ದ ಮುಂಬೈ ದಾಳಿ ಪಿತೂರಿಯಲ್ಲಿ ತಾನು ಭಾಗಿಯಲ್ಲ ಎಂದಿರುವ ಅಜ್ಮಲ್ ಕಸಬ್, ತನ್ನ ಪಾತ್ರ ದಾಳಿಗೆ ಮಾತ್ರ ಸೀಮಿತ; ತಾನು ಕಾಂಟ್ರಾಕ್ಟ್ ಕಿಲ್ಲರ್ ಮಾತ್ರ ಎಂದು ವಾದಿಸಿದ್ದಾನೆ.

ಈ ವಾದವನ್ನು ಕಸಬ್ ನೇರವಾಗಿ ಮಾಡಿಲ್ಲ. ತನ್ನ ವಕೀಲ ಅಮೀನ್ ಸೋಲ್ಕರ್ ಮೂಲಕ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರನ್ನೊಳಗೊಂಡ ಬಾಂಬೆ ಹೈಕೋರ್ಟ್ ಪೀಠದಲ್ಲಿ ವಾದ ಮಂಡಿಸಿದ್ದಾನೆ.
PTI

ಮುಂಬೈ ದಾಳಿ ಸಂಬಂಧ ವಿಶೇಷ ನ್ಯಾಯಾಲಯವು ವಿಧಿಸಿದ್ದ ಮರಣ ದಂಡನೆ ಖಾಯಂಗೊಳಿಸುವ ವಿಚಾರಣೆ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಸರಕಾರಿ ವಕೀಲರು ತನ್ನ ವಾದವನ್ನು ಮುಗಿಸಿದ ನಂತರ ಇದೀಗ, ಕಸಬ್ ಪರ ವಾದ ಮಂಡನೆ ಆರಂಭವಾಗಿದೆ.

ಹೊಟೇಲ್ ತಾಜ್‌ಮಹಲ್, ಹೊಟೇಲ್ ಒಬೆರಾಯ್-ಟ್ರಿಡೆಂಟ್ ಮತ್ತು ನಾರಿಮನ್ ಹೌಸ್‌ಗಳ ಮೇಲೆ ನಡೆದ ದಾಳಿಗಳ ಹಿಂದಿನ ಪಿತೂರಿಯಲ್ಲಿ ಕಸಬ್ ಪಾತ್ರವಿದೆ ಎನ್ನುವ ಕುರಿತು ಯಾವುದೇ ಪುರಾವೆಗಳಿಲ್ಲ. ಆತನ ಪಾತ್ರ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಮತ್ತು ಕಾಮಾ ಹಾಸ್ಪಿಟಲ್ ಸುತ್ತ ನಡೆದ ದಾಳಿಗೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಪ್ರತಿವಾದಿ ವಕೀಲರು ವಾದಿಸಿದರು.

ಕಸಬ್ ಪಾತ್ರದ ಬಗ್ಗೆ ಹೆಚ್ಚೆಂದರೆ ಆತ ಒಬ್ಬ ಕಾಂಟ್ರಾಕ್ಟ್ ಕಿಲ್ಲರ್ ಎಂದು ಹೇಳಬಹುದು. ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಮತ್ತು ಕಾಮಾ ಹಾಸ್ಪಿಟಲ್ ಸುತ್ತ ನಡೆದ ದಾಳಿಗಳಿಗೆ ಆತನನ್ನು ಜವಾಬ್ದಾರನನ್ನಾಗಿ ಮಾಡಬಹುದು ಎಂದು ಸೋಲ್ಕರ್ ಹೇಳಿದರು.

ಕಸಬ್ ಪರ ವಕೀಲ ಸೋಲ್ಕರ್ ವಾದವನ್ನು ಗಮನಿಸಿದಾಗ, ಅವರು ತನ್ನ ಕಕ್ಷಿಗಾರನ ಶಿಕ್ಷೆಯನ್ನು ಕಡಿಮೆಗೊಳಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ದಾಳಿಯಲ್ಲಿ ಆತನ ಪಾತ್ರ ತುಂಬಾ ಕಡಿಮೆ ಎನ್ನುವುದನ್ನು ಸಾಬೀತುಪಡಿಸಿದಲ್ಲಿ, ಆತನಿಗೆ ನೀಡಲಾಗಿರುವ ಮರಣ ದಂಡನೆ ಶಿಕ್ಷೆ ಜೀವಾವಧಿಗೆ ಇಳಿಯಬಹುದು ಎಂಬ ನಿಟ್ಟಿನಲ್ಲಿ, ಅದನ್ನೇ ಗುರಿ ಮಾಡಿದ್ದಾರೆ.

ಅದೇ ಹೊತ್ತಿಗೆ ಕಸಬ್ ವಕೀಲರು ಮತ್ತೊಂದು ವಿಶಿಷ್ಟ ವಾದವನ್ನು ಮಂಡಿಸಿ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಮುಂಬೈ ದಾಳಿ ಪ್ರಕರಣದಲ್ಲಿ ಕಸಬ್ ಇಬ್ಬಗೆಯ ತಪ್ಪೊಪ್ಪಿಗೆ ನೀಡಿದ್ದಾನೆ. ಆರಂಭದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ಹೇಳಿದ್ದು, ನಂತರ ನ್ಯಾಯಾಲಯದ ಮುಂದೆ ಹೇಳಿರುವುದಕ್ಕೆ ತಾಳೆಯಾಗುತ್ತಿಲ್ಲ. ಹಾಗಾಗಿ ಇವೆರಡರಲ್ಲಿ ಯಾವೊಂದನ್ನು ಸ್ವೀಕರಿಸುವುದು ಸರಿಯಾಗದು. ಇವೆರಡೂ ತಪ್ಪೊಪ್ಪಿಗೆಗಳನ್ನು ತಳ್ಳಿ ಹಾಕಬೇಕು ಎಂದು ಮನವಿ ಮಾಡಿದರು.

ಮೀನುಗಾರಿಕಾ ದೋಣಿ ಕುಬೇರ್‌ನಲ್ಲಿದ್ದ ಅಮರಸಿಂಗ್ ಸೋಲಂಕಿ, ಪೊಲೀಸ್ ಅಧಿಕಾರಿ ತುಕರಾಂ ಓಂಬಳೆಯವರನ್ನು ತಾನು ಕೊಂದು ಹಾಕಿರುವುದು ಹೌದು ಎಂದು ಕಸಬ್ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಆದರೆ ವಿಚಾರಣಾ ನ್ಯಾಯಾಲಯದಲ್ಲಿ ಬೇರೆಯೇ ಹೇಳಿಕೆ ನೀಡಿದ್ದ. ಸೋಲಂಕಿಯವರನ್ನು ನಾನು ಕೊಂದಿಲ್ಲ, ನನ್ನ ಮೇಲೆಯೇ ಪೊಲೀಸರು ದಾಳಿ ನಡೆಸಿದ್ದರು. ಓಂಬಳೆಯವರನ್ನು ನಾನು ಕೊಂದಿಲ್ಲ. ಹೇಮಂತ್ ಕರ್ಕರೆ, ವಿಜಯ ಸಾಲಸ್ಕರ್ ಮತ್ತು ಅಶೋಕ್ ಕಾಮ್ಟೆಯವರನ್ನು ಕೊಂದದ್ದು ಇಸ್ಮಾಯಿಲ್ ಎಂದು ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ