ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿಮ್ಮಪ್ಪನ ಗರ್ಭಗುಡಿಗೆ ಚಿನ್ನದ ಹೊದಿಕೆ; ಕೋರ್ಟ್ ತಡೆ (Gold plating | Tirumala | Tirupati | Subramaniam Swamy)
Bookmark and Share Feedback Print
 
ತಿರುಪತಿ ತಿಮ್ಮಪ್ಪನ ಗರ್ಭಗುಡಿಗೆ ಚಿನ್ನದ ಹೊದಿಕೆಯನ್ನು ಹಾಕುವ ಯೋಜನೆ ಅಕ್ರಮವಾಗಿದ್ದು, ಇದರಿಂದ ಪುರಾತನ ಗೋಡೆಗಳ ಮೇಲಿರುವ ಶಾಸನಗಳು ಅಳಿಸಿ ಹೋಗಬಹುದು. ಹಾಗಾಗಿ ಯೋಜನೆಯನ್ನು ಮುಂದುವರಿಸುವುದು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

'ಆನಂದ ನಿಲಯಂ ಅನಂತ ಸ್ವರ್ಣಮಯಂ ಪಥಕಂ' ಎಂದು ಹೆಸರಿಸಲಾಗಿದ್ದ ಈ ಯೋಜನೆಗೆ ಒಟ್ಟು 250 ಕೆ.ಜಿ. ಚಿನ್ನದ ಅಗತ್ಯವಿತ್ತು. ಒಟ್ಟಾರೆ 1,000 ಕೋಟಿ ರೂಪಾಯಿಗಳು ಬೇಕಾಗಿತ್ತು. ಇದಕ್ಕಾಗಿ ದೇವಳದ ಆದಾಯ ಮತ್ತು ಭಕ್ತಾದಿಗಳ ದೇಣಿಗೆಯನ್ನು ಬಳಸಿಕೊಳ್ಳುವ ಚಿಂತನೆ ನಡೆದಿತ್ತು.
WD

ಆದರೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಯೋಜನೆಗೆ ಹೈಕೋರ್ಟ್ ಅಡ್ಡಗಾಲು ಹಾಕಿದೆ. ಟಿಟಿಡಿ ಈ ಯೋಜನೆಗಾಗಿ ತರಾತುರಿ ಪ್ರದರ್ಶಿಸುತ್ತಿದೆ, ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ತಿರುಪತಿ ತಿಮ್ಮಪ್ಪನ ಗರ್ಭಗುಡಿಗೆ ಸ್ವರ್ಣಲೇಪನ ಮಾಡುವುದಿದ್ದರೆ ಅದಕ್ಕಾಗಿ ಗೋಡೆಗಳ ಮೇಲಿರುವ ಶಾಸನಗಳ ನಾಶ ಅನಿವಾರ್ಯವಾಗುತ್ತದೆ. ಆದರೆ ಈ ಶಾಸನಗಳು ಪುರಾತನವಾದು ಆಗಿರುವುದರಿಂದ ಮತ್ತು ಧಾರ್ಮಿಕ ಮಹತ್ವಗಳನ್ನು ಹೊಂದಿರುವುದರಿಂದ ಹಾಗೆ ಮಾಡುವುದು ಸರಿಯಲ್ಲ. ಜತೆಗೆ ಚಿನ್ನದ ಹೊದಿಕೆಯನ್ನು ಹಾಕುವಾಗ ಸುಮಾರು 1,400 ಮೊಳೆಗಳನ್ನು ಗೋಡೆಗಳಿಗೆ ಹಾಕಬೇಕಾಗುತ್ತದೆ. ಇದರಿಂದ ಪ್ರಮುಖ ದೇವಾಲಯವು ದುರ್ಬಲವಾಗಬಹುದು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಮತ್ತು ಇತರ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು.

ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಟಿಟಿಡಿ, ಶಿಲಾ ಶಾಸನಗಳ ಫೋಟೋಗಳನ್ನು ತೆಗೆಯಲಾಗಿದೆ. ಅವುಗಳನ್ನು ಭಾಷಾಂತರಿಸಿ ಎದುರುಗಡೆ ಬೋರ್ಡೊಂದರಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆ ಮಾಡಿದಲ್ಲಿ ಪ್ರತಿಯೊಬ್ಬರಿಗೂ ಅದನ್ನು ನೋಡಲು ಸಾಧ್ಯವಾಗುತ್ತದೆ. ಜತೆಗೆ ಇದು ಪರಿವರ್ತನಾ ಚಟುವಟಿಕೆ ಎಂದಿತ್ತು.

ಪರಿವರ್ತನಾ ಚಟುವಟಿಕೆಯ ಹೆಸರಿನಲ್ಲಿ ಈ ರೀತಿಯ ಕಾಮಗಾರಿಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಇದು ಭಾರತದ ಸಂವಿಧಾನದ ಅನುಚ್ಛೇದ 25 ಮತ್ತು 26ರ ಉಲ್ಲಂಘನೆಯಾಗುತ್ತದೆ. ಹಾಗಾಗಿ ಯೋಜನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ. ಪ್ರಕಾಶ್ ರಾವ್ ಮತ್ತು ರೆಡ್ಡಿ ಕಾಂತ ರಾವ್ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.

ಬಳ್ಳಾರಿ ರೆಡ್ಡಿ ಸಚಿವರುಗಳು, ಮುಂಬೈ ಉದ್ಯಮಿಗಳು ಸೇರಿದಂತೆ ಭಕ್ತಾದಿಗಳು ಸುಮಾರು 180 ಕೆ.ಜಿ. ಚಿನ್ನ ನೀಡಿದ್ದಾರೆ. ಇದಕ್ಕೆ ಇನ್ನಷ್ಟು ಸೇರಿಸಿ ಗರ್ಭಗುಡಿಯನ್ನು ಸ್ವರ್ಣಮಯವನ್ನಾಗಿಸುವುದು ಟಿಟಿಡಿ ಬಯಕೆಯಾಗಿತ್ತು.

ಭಾರತೀಯ ಪುರಾತತ್ವ ಇಲಾಖೆ, ಇತಿಹಾಸಕಾರರು, ಧಾರ್ಮಿಕ ಮುಖಂಡರು ಸೇರಿದಂತೆ ಹಲವರು ಟಿಟಿಡಿಯ ಉದ್ದೇಶಿತ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಸ್ವರ್ಣಲೇಪನ ಯೋಜನೆಯನ್ನು ಕೈಗೊಳ್ಳುವುದರಿಂದ ದೇವಳದ ಪುರಾತನ ಶಿಲ್ಪಗಳು, ಕಲೆ ಮತ್ತು ಶಾಸನಗಳು ನಾಶವಾಗುತ್ತವೆ ಎಂದು ಭೀತಿ ವ್ಯಕ್ತಪಡಿಸಿದ್ದರು.

ಚಲಿಸುವ ಕಾರ್ಪೆಟ್ ಅಳವಡಿಕೆ...
ಇದರ ಬೆನ್ನಿಗೆ ಟಿಟಿಡಿ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಗರ್ಭಗುಡಿಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಲಕ್ಷಗಟ್ಟಲೆ ಮಂದಿ ಸಾಲಿನಲ್ಲಿ ನಿಲ್ಲುವ ಸಂದರ್ಭದಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಾಂತ್ರಿಕವಾದ ಚಲಿಸುವ ಕಾರ್ಪೆಟ್‌ಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ.

ಈ ಸಂಬಂಧ ಟಿಟಿಡಿ ಗುಪ್ತ ಸಭೆ ನಡೆಸಿದೆ. ಇಂಜಿನಿಯರುಗಳು ಮತ್ತು ದೇವಳದ ಸಿಬ್ಬಂದಿಗಳ ಜತೆ ಡಿಸೆಂಬರ್ 15ರ ಒಳಗೆ ಇನ್ನೊಂದು ಸುತ್ತಿನ ಸಭೆಯನ್ನು ನಡೆಸಲಾಗುತ್ತದೆ. ಸಭೆ ಯಶಸ್ವಿಯಾದಲ್ಲಿ 2011ರ ಮಾರ್ಚ್ ತಿಂಗಳಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ