ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು ಮರು ಪರಿಶೀಲನೆ; ಹೈಕೋರ್ಟಿಗೆ ಅರ್ಜಿ (Ayodhya judgment | Ram Janam Bhoomi | Babri Masjid | Allahabad High Court)
Bookmark and Share Feedback Print
 
ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿಯ ಪ್ರಮುಖ ಪ್ರಕರಣದ ತೀರ್ಪುಗಳಲ್ಲಿ ಒಂದನ್ನು ಮರು ಪರಿಶೀಲನೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠಕ್ಕೆ ಮಂಗಳವಾರ ಮನವಿಯೊಂದನ್ನು ಸಲ್ಲಿಸಲಾಗಿದೆ.

ಭಗವಾನ್ ರಾಮಲಲ್ಲಾ ವಿರಾಜಮಾನ್ ಮತ್ತು ಇತರರ ಪ್ರಕರಣದ ಸಂಬಂಧ ಸೆಪ್ಟೆಂಬರ್ 30ರಂದು ಮೂರು ನ್ಯಾಯಮೂರ್ತಿಗಳ ವಿಶೇಷ ಪೂರ್ಣ ಪೀಠವು ನೀಡಿರುವ ತೀರ್ಪನ್ನು ಪುನರ್ ವಿಮರ್ಶೆ ನಡೆಸಬೇಕು ಎಂದು ಎಂ. ಇಸ್ಮಾಯಿಲ್ ಫಾರೂಕಿ ಎಂಬ ಅರ್ಜಿದಾರರು ಮನವಿ ಮಾಡಿದ್ದಾರೆ.
PR

ತೀರ್ಪು ಆಕ್ಷೇಪಕಾರಿಯಾಗಿರುವುದರಿಂದ ಮತ್ತು ತುಂಬಾ ಹಳೆಯ ಪ್ರಕರಣವಾಗಿರುವುದರಿಂದ ನ್ಯಾಯದ ಹಿತಾಸಕ್ತಿ ದೃಷ್ಟಿಯಿಂದ ಮರು ಪರಿಶೀಲನೆ ನಡೆಸಬಹುದಾಗಿದೆ ಎಂದು ಅರ್ಜಿದಾರರು ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ನಿರ್ಮೋಹಿ ಅಖಾಡ ಮತ್ತು ರಾಜೇಂದ್ರ ಸಿಂಗ್ ಪ್ರಕರಣಗಳ ಕುರಿತು ಇದೇ ನ್ಯಾಯಾಲಯವು ನೀಡಿರುವ ತೀರ್ಪನ್ನು ಮರು ಪರಿಶೀಲನೆ ನಡೆಸಬೇಕು ಎಂದು ಕಳೆದ ವಾರ ಫಾರೂಕಿ ಮನವಿ ಮಾಡಿದ್ದರು. ಅದರ ಬೆನ್ನಿಗೆ ಈಗ ಮತ್ತೊಂದು ಮನವಿಯನ್ನು ಸಲ್ಲಿಸಿದ್ದಾರೆ. ಇವೆಲ್ಲ ಮನವಿಗಳ ವಿಚಾರಣೆ ಡಿಸೆಂಬರ್ 10ರಂದು ಪೀಠದ ಮುಂದೆ ಬರುವ ನಿರೀಕ್ಷೆಯಿದೆ.

ಹಿಂದೂಗಳ ಶ್ರದ್ಧಾಕೇಂದ್ರ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ಒಡೆತನದ ಕುರಿತು ಇದೇ ವರ್ಷದ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಯೋಧ್ಯೆಯನ್ನು ಮೂರು ವಿಭಾಗಗಳನ್ನಾಗಿ ಮಾಡಿದ್ದ ನ್ಯಾಯಾಲಯವು, ಹಿಂದೂ ಮತ್ತು ಮುಸ್ಲಿಮರಿಗೆ ಹಂಚಿಕೆ ಮಾಡಿತ್ತು. ಅಲ್ಲದೆ ಪ್ರಸಕ್ತ ಇರುವ ತಾತ್ಕಾಲಿಕ ರಾಮಮಂದಿರವನ್ನು ಸ್ಥಳಾಂತರಗೊಳಿಸಬಾರದು ಎಂದೂ ತೀರ್ಪಿನಲ್ಲಿ ಹೇಳಿತ್ತು.

ನ್ಯಾಯಮೂರ್ತಿಗಳಾದ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಡಿ.ವಿ. ಶರ್ಮಾ ಈ ತೀರ್ಪನ್ನು ನೀಡಿದ್ದರು.

ತೀರ್ಪಿನ ಕುರಿತು ಯಾರಿಗಾದರೂ ಅಸಮಾಧಾನಗಳಿದ್ದರೆ ಇದೇ ಸೋಮವಾರದಿಂದ ಒಂದು ವಾರದ ಒಳಗಾಗಿ ತಮ್ಮ ಮನವಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿರುವ ಹಿನ್ನೆಲೆಯಲ್ಲಿ ಫಾರೂಕಿ ತನ್ನ ಮನವಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ. ಇನ್ನೂ ಹಲವು ಅರ್ಜಿಗಳು ಈ ಸಂಬಂಧ ದಾಖಲಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ