ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರದ ಯುಪಿಎ ಸರಕಾರದ ಹಗರಣಗಳೆಷ್ಟು ಗೊತ್ತಾ? (NDA | rally against corruption | Congress | 2G scam)
Bookmark and Share Feedback Print
 
2ಜಿ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ, ಸಿವಿಸಿ ನೇಮಕಾತಿ ವಿವಾದ ಹೀಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿದ್ದರೂ ಕೇಂದ್ರ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಪ್ರತಿಭಟಿಸಿ ದೇಶದ ಪ್ರಮುಖ ನಗರಗಳಲ್ಲಿ ರ‌್ಯಾಲಿ ನಡೆಸಲು ಬಿಜೆಪಿ ನೇತೃತ್ವದ ಎನ್‌ಡಿಎ ನಿರ್ಧರಿಸಿದ್ದು, ಇದಕ್ಕೆ ಯುಪಿಎಯೇತರ ಪಕ್ಷಗಳನ್ನು ಒಗ್ಗೂಡಿಸಲು ಯತ್ನ ನಡೆಸಲಾಗುತ್ತಿದೆ.

ಈ ಸಂಬಂಧ ಎನ್‌ಡಿಎ ಮುಖಂಡರು ಮಂಗಳವಾರ ಸಭೆ ನಡೆಸಿದ್ದಾರೆ. ಯುಪಿಎ ವಿರೋಧಿ ರ‌್ಯಾಲಿ ನಡೆಸುವ ಸಂಬಂಧ ಇತರ ಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಜವಾಬ್ದಾರಿಯನ್ನು ಎನ್‌ಡಿಎ ಸಂಚಾಲಕ ಶರದ್ ಯಾದವ್‌ಗೆ ನೀಡಲಾಗಿದೆ.

2ಜಿ ಹಗರಣದ ಸಂಬಂಧ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಯಬೇಕು ಎಂದು ಸಂಸತ್ತಿನಲ್ಲಿ ಹೋರಾಟ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಎಡಪಕ್ಷಗಳು, ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಸಮಾಜವಾದಿ ಪಕ್ಷ, ಬಿಜು ಜನತಾದಳ (ಬಿಜೆಡಿ), ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಎಐಎಡಿಎಂಕೆಗಳು ಕೂಡ ಬೆಂಬಲ ನೀಡುತ್ತಿವೆ. ಹಾಗಾಗಿ ಈ ಪಕ್ಷಗಳನ್ನು ರ‌್ಯಾಲಿಯ ವೇದಿಕೆಗೆ ಕರೆ ತರುವ ಯತ್ನವನ್ನು ಎನ್‌ಡಿಎ ನಡೆಸುತ್ತಿದೆ.

ಆ ಮೂಲಕ ಯುಪಿಎ ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಎನ್‌ಡಿಎಯದ್ದು. ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡ ಬಳಿಕ ಅಂದರೆ ಡಿಸೆಂಬರ್ 13ರ ನಂತರ ದೇಶದಾದ್ಯಂತದ ಪ್ರಮುಖ ನಗರಗಳಲ್ಲಿ ರ‌್ಯಾಲಿ ನಡೆಯಲಿದೆ.

ಯುಪಿಎ ಸರಕಾರದ ಪ್ರಮುಖ ವಿವಾದ-ಹಗರಣಗಳು:

ಕಾಸಿಗಾಗಿ ಓಟು- ಪರಮಾಣು ಒಪ್ಪಂದದ ಅವಧಿಯಲ್ಲಿ ಸರಕಾರದ ಪರ ಮತ ಚಲಾಯಿಸಲು ಲಂಚ ನೀಡಿದ ಆರೋಪ. ಪರಮಾಣು ಒಪ್ಪಂದವನ್ನು ವಿರೋಧಿಸಿ ಸರಕಾರದಿಂದ ಎಡಪಕ್ಷಗಳು ಬೆಂಬಲ ವಾಪಸ್ ಪಡೆದುಕೊಂಡ ನಂತರ 2008ರ ಜುಲೈ 22ರಂದು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸರಕಾರವು ಲಂಚ ನೀಡಿತ್ತು ಎಂದು ಆರೋಪಿಸಲಾಗಿತ್ತು. ಈ ತನಿಖೆಯೂ ದಾರಿ ತಪ್ಪಿ ಈಗ ನೆನೆಗುದಿಗೆ ಬಿದ್ದಿದೆ.

ಸಿಬಿಐ ದುರ್ಬಳಕೆ- ರಾಜಕೀಯ ಎದುರಾಳಿಗಳ ವಿರುದ್ಧ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪವಿದು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಮಾಜಿ ಗೃಹಸಚಿವ ಅಮಿತ್ ಶಾ ಮುಂತಾದವರ ವಿರುದ್ಧ ಸಿಬಿಐಯನ್ನು ಛೂ ಬಿಟ್ಟು, ಭಯೋತ್ಪಾದಕರ ರಕ್ಷಣೆಗೆ ಮುಂದಾದದ್ದು. ಮಾಯಾವತಿ, ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಅವರಂತಹ ಪರಮ ಭ್ರಷ್ಟರನ್ನು ರಕ್ಷಿಸಲು ಮೃದು ನೀತಿ ಅನುಸರಿಸಿದ್ದು.

ಐಪಿಎಲ್ ಹಗರಣ- ಐಪಿಎಲ್ ಹಗರಣದಲ್ಲಿ ಕಾಂಗ್ರೆಸ್ ಸಂಸದರು, ಸಚಿವರು. ಇದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಶಶಿ ತರೂರ್ ಮಾತ್ರ. ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ತಮ್ಮ ಸ್ಥಾನಗಳಲ್ಲೇ ಮುಂದುವರಿದಿದ್ದಾರೆ. ಈ ಸಂಬಂಧ ಯಾವುದೇ ತನಿಖೆಯನ್ನು ಕೇಂದ್ರ ನಡೆಸಿಲ್ಲ.

ಅಕ್ಕಿ ರಫ್ತು ಹಗರಣ- ಇದು ನಡೆದದ್ದು ಯುಪಿಎ ಸರಕಾರದ ಮೊದಲ ಅವಧಿಯಲ್ಲಿ. ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಮಿತಿ ಮೀರಿ ಏರಿಕೆಯಾಗಿದ್ದ ನಿಟ್ಟಿನಲ್ಲಿ ಸರಕಾರವು ಬಾಸ್ಮತಿಯೇತರ ಅಕ್ಕಿ ರಫ್ತನ್ನು ನಿಷೇಧಿಸಿತ್ತು. ಆದರೆ ಒಪ್ಪಂದಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ರಾಷ್ಟ್ರಗಳಿಗೆ ಸೀಮಿತ ಪ್ರಮಾಣದಲ್ಲಿ ಅಕ್ಕಿ ರಫ್ತಿಗೆ ಅವಕಾಶ ನೀಡಲಾಗಿತ್ತು. ಇದನ್ನೇ ಅಧಿಕಾರಿಗಳು ಮತ್ತು ಪೂರೈಕೆದಾರರು ದುರ್ಬಳಕೆ ಮಾಡಿಕೊಂಡಿದ್ದರು.

ಸಕ್ಕರೆ-ಗೋಧಿ ರಫ್ತು ಹಗರಣ- ಭಾರತದ ಗೋದಾಮುಗಳಲ್ಲಿ ಸಕ್ಕರೆ-ಗೋಧಿ ದಾಸ್ತಾನಿದ್ದ ಹೊರತಾಗಿಯೂ ವಿದೇಶಗಳಿಂದ ದುಬಾರಿ ಬೆಲೆಗೆ ಆಮದು ಮಾಡಿಕೊಂಡಿದ್ದು. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದ್ದರು.

ಗೇಮ್ಸ್ ಹಗರಣ- ಕಾಂಗ್ರೆಸ್ ಸಂಸದ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ನೇತೃತ್ವದ ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಬಹುಕೋಟಿ ಹಗರಣ. 70ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಭಾರತದ ಮಾನ ಹರಾಜು ಹಾಕಿದ್ದಲ್ಲದೆ, ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿ ಹಾಕಿದ ಆರೋಪ. ಆದರೂ ಇದುವರೆಗೆ ಕಲ್ಮಾಡಿ ವಿರುದ್ಧ ಯಾವುದೇ ಕ್ರಮ ಅಥವಾ ತನಿಖೆ ನಡೆದಿಲ್ಲ.

ಪ್ರಸಾರ ಭಾರತಿ ಹಗರಣ- ಬಿ.ಎಸ್. ಲಲ್ಲಿ ಹಗರಣದಲ್ಲಿ ಪಾಲ್ಗೊಂಡಿದ್ದರೂ, ಹುದ್ದೆಯಲ್ಲಿ ಮುಂದುವರಿಕೆ. ಕಾಮನ್‌ವೆಲ್ತ್ ಗೇಮ್ಸ್ ಪ್ರಸಾರ ಹಕ್ಕುಗಳಿಗೆ ಸಂಬಂಧಪಟ್ಟಂತೆ ನಡೆದಿರುವ 68 ಕೋಟಿ ರೂ. ಹಗರಣದಲ್ಲಿ ಲಲ್ಲಿ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಹೇಳುತ್ತಿದೆ.

2ಜಿ ಹಗರಣ- ಸುಮಾರು 1.70 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ. ಇದರ ಸೂತ್ರಧಾರಿ ಡಿಎಂಕೆ ಸಂಸದ, ಮಾಜಿ ಸಚಿವ ಎ. ರಾಜಾ. ಸ್ವತಃ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಈ ವಿಚಾರದಲ್ಲಿ ಸುಮ್ಮನಿದ್ದುದಕ್ಕೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಜೆಪಿಸಿ ತನಿಖೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಗೆ ಕೇಂದ್ರ ಒಪ್ಪುತ್ತಿಲ್ಲ.

ಸಿವಿಸಿ ವಿವಾದ- 'ಕಳಂಕಿತ' ಪಿ.ಜೆ. ಥಾಮಸ್ ಕೇಂದ್ರ ಜಾಗೃತ ದಳದ ಆಯುಕ್ತರಾಗಿ ನೇಮಕ. ದೂರಸಂಪರ್ಕ ಇಲಾಖೆ ಕಾರ್ಯದರ್ಶಿಯಾಗಿದ್ದಾಗ 2ಜಿ ಹಗರಣ ತಡೆಯಲು ವಿಫಲರಾಗಿದ್ದ, ಇತರೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಉನ್ನತ ಹುದ್ದೆಗೆ ನೇಮಿಸಿತ್ತು. ಈಗ ಸುಪ್ರೀಂ ಕೋರ್ಟಿನಿಂದ ಈ ವಿಚಾರದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದೆ.

ಎಲ್ಐಸಿ ಗೃಹಸಾಲ ಹಗರಣ- ಜೀವ ವಿಮಾ ನಿಗಮದ ಅಂಗ ಸಂಸ್ಥೆ ಹಾಗೂ ಮೂರು ರಾಷ್ಟ್ರೀಕೃತ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿರುವ ಬಹುಕೋಟಿ ಹಗರಣವಿದು. ಗೃಹ ನಿರ್ಮಾಣ ಸಾಲಕ್ಕಾಗಿ ಲಂಚ ಪಡೆದದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಗಳಿವೆ. ಈ ಕುರಿತು ತನಿಖೆ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ