ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿಗಳ ಮನೆ ಒಡೆದ ಕಾಂಗ್ರೆಸ್; ಜಗನ್ ಈಗ ಏಕಾಂಗಿ
(Andhra Pradesh | YS Jaganmohan Reddy | TDP | N Chandrababu Naidu)
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಕುಟುಂಬದೊಳಗೆ ವಿಷ ಬೀಜ ಬಿತ್ತಿರುವ ಕಾಂಗ್ರೆಸ್, ಅವರ ಸಹೋದರ ವೈ.ಎಸ್. ವಿವೇಕಾನಂದ ರೆಡ್ಡಿಯವರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ವೈ.ಎಸ್. ಜಗನ್ ಮೋಹನ್ ರೆಡ್ಡಿಯನ್ನು ಏಕಾಂಗಿಯನ್ನಾಗಿಸಿದೆ. ಸಂಪುಟ ವಿಸ್ತರಣೆಯಲ್ಲೂ ಇದೇ ತಂತ್ರವನ್ನು ಅನುಸರಿಸಿದೆ.
ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿಯವರು ಬುಧವಾರ 39 ಸಚಿವರ ಸಂಪುಟ ವಿಸ್ತರಣೆ ನಡೆಸಿದ್ದಾರೆ. ನಿರೀಕ್ಷೆಯಂತೆ ಜಗನ್ ನಿಷ್ಠರೆಂದು ಹೇಳಲಾಗಿರುವ ಇಬ್ಬರು (ಬಾಲಿನೇನಿ ಶ್ರೀನಿವಾಸ ರೆಡ್ಡಿ, ಪಿಲ್ಲಿ ಸುಭಾಷ್ ಚಂದ್ರ ಬೋಸ್) ಸೇರಿದಂತೆ ಐವರು ಸಚಿವರನ್ನು ಸಂಪುಟದಿಂದ ಕೈ ಬಿಡಲಾಗಿದೆ.
ಜಗನ್ ಚಿಕ್ಕಪ್ಪ ವಿವೇಕಾನಂದ ರೆಡ್ಡಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇವರು ಸಚಿವರಾಗುವುದರೊಂದಿಗೆ ವಿಧಾನ ಪರಿಷತ್‌ನ ಏಕೈಕ ಸದಸ್ಯ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಂತಾಗಿದೆ.
ವೈಎಸ್ಆರ್ ಬದುಕಿರುವಾಗಲೇ ವಿವೇಕಾನಂದ ರೆಡ್ಡಿಯವರ ಜತೆಗಿನ ಸಂಬಂಧ ಅಷ್ಟೊಂದು ಉತ್ತಮವಾಗಿರಲಿಲ್ಲ. ಇದು ಅವರ ನಿಧನದ ನಂತರವೂ ಮುಂದುವರಿದಿತ್ತು. ಇವರ ನಡುವೆ ಇದ್ದುದು ಕೌಟುಂಬಿಕ ವೈಷಮ್ಯ. ಇದು ಬಹಿರಂಗಗೊಂಡಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಅದರ ಲಾಭ ಪಡೆದುಕೊಂಡಿದೆ. ಮನೆಯನ್ನು ಸ್ಪಷ್ಟವಾಗಿ ಎರಡು ಹೋಳು ಮಾಡಲಾಗಿದೆ.
ವೈಎಸ್ಆರ್ ಸಹೋದರ ತಮ್ಮ ಪಕ್ಷದಲ್ಲೇ ಇದ್ದಾರೆ, ಜಗನ್ ಆತುರ ಸ್ವಭಾವದ ಯುವಕ ಎಂದು ಪ್ರಚಾರ ಮಾಡುವ ಮೂಲಕ ರೆಡ್ಡಿ ಅಭಿಮಾನಿಗಳನ್ನು ಸೆಳೆಯುವ ಯತ್ನ ಕಾಂಗ್ರೆಸ್ಸಿನದ್ದು. ಅದೇ ನಿಟ್ಟಿನಲ್ಲಿ ವಿವೇಕಾನಂದ ರೆಡ್ಡಿಯವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ನಡೆಸಿತ್ತು. ಅದರಂತೆ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ, ಜಗನ್ ವಿರುದ್ಧ ತಿರುಗಿ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಇದು ಜಗನ್‌ಗೆ ಆಗಿರುವ ಮೊದಲ ಹಿನ್ನಡೆ ಎಂದು ಹೇಳಬಹುದಾದರೂ, ವಿವೇಕಾನಂದ ರೆಡ್ಡಿಯವರು ರಾಜಕೀಯ ಕ್ಷೇತ್ರದಲ್ಲಿ ಪ್ರಬಲರಾಗಿರದೇ ಇರುವುದರಿಂದ ಹಿನ್ನಡೆಯಲ್ಲ ಎಂದೂ ವಿಶ್ಲೇಷಿಸಬಹುದು. ಸ್ವತಃ ವೈಎಸ್ಆರ್ ಪತ್ನಿ ಜಯಲಕ್ಷ್ಮಿ ತನ್ನ ಪುತ್ರ ಜಗನ್‌ಗೆ ಸಂಪೂರ್ಣ ಬೆಂಬಲ ಘೋಷಿಸಿರುವುದರಿಂದ ಕಾಂಗ್ರೆಸ್ ತಂತ್ರ ಫಲಿಸದು ಎಂದೇ ಹೇಳಲಾಗುತ್ತಿದೆ.
ಆದರೂ ಕಾಂಗ್ರೆಸ್ ಜಗನ್‌ರನ್ನು ಏಕಾಂಗಿಯಾಗಿಸಲು ಇನ್ನಿಲ್ಲದ ಯತ್ನಗಳನ್ನು ನಡೆಸುತ್ತಿದೆ. ಸಂಪುಟದಲ್ಲಿದ್ದ ಅವರ ಬೆಂಬಲಿಗರನ್ನು ಕೈ ಬಿಡುವ ಮೂಲಕ ಹೈಕಮಾಂಡ್ ಯಾವುದನ್ನೂ ಸಹಿಸದು ಎಂಬ ಸಂದೇಶವನ್ನೂ ರವಾನಿಸಿದೆ. ಜತೆಗೆ ಹಲವು ಹೊಸ ಮುಖಗಳನ್ನು ಸಂಪುಟಕ್ಕೆ ತರುವ ಮೂಲಕ ಜಗನ್ ಕಡೆ ಒಲವು ತೋರಿಸುವ ಸಾಧ್ಯತೆಗಳನ್ನೇ ಕ್ಷೀಣವಾಗಿಸಿದೆ.
ಇಂತಹ ತಂತ್ರಗಳಿಂದ ಪ್ರಸಕ್ತ ಬಹುತೇಕ ಜಗನ್ ದುರ್ಬಲರಾಗಿರುವುದು ಹೌದು. ಅವರ ಮುಂದಿನ ನಡೆ ಏನು ಎನ್ನುವುದು ಆಂಧ್ರ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.