ಬಿ.ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಬಿಜೆಪಿ ವರಿಷ್ಠರು ತೀರ್ಮಾನಿಸಿರುವುದನ್ನು ಬಳ್ಳಾರಿ ರೆಡ್ಡಿಗಳು ವಿರೋಧಿಸುತ್ತಾ ಬಂದಿರುವುದು ಗೊತ್ತೇ ಇದೆ. ಇದರಿಂದ ಸುಷ್ಮಾ ಸ್ವರಾಜ್ ಕೂಡ ಅಸಮಾಧಾನಗೊಂಡಿದ್ದು, ಅದೇ ಕಾರಣದಿಂದ ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಭೂ ಹಗರಣಗಳಲ್ಲಿ ಸಿಲುಕಿರುವ ಹೊರತಾಗಿಯೂ ಯಡಿಯೂರಪ್ಪ ಅವರನ್ನು ಮುಂದುವರಿಸಲು ನಿರ್ಧರಿಸಿದ್ದ ಬಿಜೆಪಿ ವಿರುದ್ಧ ರೆಡ್ಡಿಗಳು ತಿರುಗಿ ಬಿದ್ದಿದ್ದಾರೆ. ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಕಳೆದ ವಾರವಷ್ಟೇ ವದಂತಿಗಳು ಹಬ್ಬಿದ್ದವು.
ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಬೆಂಬಲಿಗ ಶಾಸಕರ ಜತೆ ರಹಸ್ಯ ಸಭೆ ನಡೆಸಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಗಳಾಗಿ ಮುಂದುವರಿಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಂಬಂಧ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿತ್ತು.
ಆರಂಭದಿಂದಲೂ ಸುಷ್ಮಾ ಸ್ವರಾಜ್ ಬಣದಲ್ಲಿ ಗುರುತಿಸಿಕೊಂಡಿರುವ ರೆಡ್ಡಿಗಳು, ಮತ್ತೆ ತಮ್ಮ ಕಿರಿಕಿರಿ ಆರಂಭಿಸಿದ್ದಾರೆ. ಇದನ್ನು ಬಿಜೆಪಿ ಅಧ್ಯಕ್ಷರೂ ಸೇರಿದಂತೆ ಇತರ ವರಿಷ್ಠರ ಜತೆ ಸುಷ್ಮಾ ಚರ್ಚಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಯಡಿಯೂರಪ್ಪನವರನ್ನು ಮತ್ತೆ ಮಾತುಕತೆ ನಡೆಸಲು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಇಲ್ಲ, ಇದು ಮಾಮೂಲಿ ಭೇಟಿ... ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಯಲು ಅವಕಾಶ ನೀಡಿರುವುದಕ್ಕಾಗಿ ವರಿಷ್ಠ ಎಲ್.ಕೆ. ಅಡ್ವಾಣಿಯವರಿಗೆ ಕೃತಜ್ಞತೆ ಸಲ್ಲಿಸಲು ತಾನು ಬಂದಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಅಡ್ವಾಣಿಯವರನ್ನು ಭೇಟಿಯಾಗಿರುವ ಅವರು, ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅವರನ್ನು ಕೂಡ ಮುಖಾಮುಖಿಯಾಗಿ ಮಾತುಕತೆ ನಡೆಸಲಿದ್ದಾರೆ.
ಮಂಗಳವಾರ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಕರ್ನಾಟಕದ ಬಿಜೆಪಿ ಸಂಸದರ ಜತೆ ಕರ್ನಾಟಕ ಭವನದಲ್ಲಿ ಬುಧವಾರ ಬೆಳಿಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಅವರು ಅಡ್ವಾಣಿ ನಿವಾಸಕ್ಕೆ ತೆರಳಿದರು.