ಪತ್ನಿಯನ್ನು ಕೊಂದಿರುವುದರ ಕುರಿತು ಸಾಕ್ಷಿ ಹೇಳಿದ್ದ ಇಬ್ಬರು ಮಕ್ಕಳು ಮತ್ತು ನೆರೆ ಹೊರೆಯವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಾಜಿ ಜವಾನನೊಬ್ಬ ಕೊಂದು ಹಾಕಿರುವ ಭೀಭತ್ಸ ಘಟನೆ ಆಂಧ್ರಪ್ರದೇಶದಿಂದ ವರದಿಯಾಗಿದೆ.
ಶ್ರೀಕಾಕುಳಂ ಸಮೀಪದ ಜಲುಮುರು ಮಂಡಲ್ ಸಮೀಪದ ಮೆಟ್ಟಪೇಟ ಎಂಬಲ್ಲಿನ ಶಂಕರ್ ರಾವ್ 2005ರಲ್ಲಿ ಪತ್ನಿಯನ್ನು ಕೊಂದು ಹಾಕಿ ಕೆಲಸದಿಂದ ವಜಾಗೊಂಡಿದ್ದ. ಈತನ ವಿರುದ್ಧ ಇಬ್ಬರು ಮಕ್ಕಳು ಮತ್ತು ಪಕ್ಕದ ಮನೆಯವರು ಸಾಕ್ಷಿ ಹೇಳಿದ್ದರು. ಅದನ್ನೇ ಮುಂದಿಟ್ಟುಕೊಂಡು ಬುಧವಾರ ಅವರೆಲ್ಲರನ್ನೂ ಕೊಚ್ಚಿ ಕೊಲೆ ಮಾಡಿದ್ದಾನೆ.
ಹೈದರಾಬಾದ್‌ನಿಂದ 600 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಮಂಗಳವಾರ ತಡರಾತ್ರಿಯೇ ಶಂಕರ ರಾವ್ ತನ್ನ ಆಟೋಪಕ್ಕೆ ಚಾಲನೆ ನೀಡಿದ್ದ. ಆರಂಭದಲ್ಲಿ ತನ್ನ ಇಬ್ಬರು ಮಕ್ಕಳಾದ ಮಹೇಶ್ (9) ಮತ್ತು ಮಾನಸ (7) ಅವರನ್ನು ಕತ್ತು ಕತ್ತರಿಸಿ ಕೊಂದು ಹಾಕಿ, ನಂತರ ನೆರೆ ಮನೆಯ ಪಿಲಾ ವೆಂಕಟಿ, ಪಿಲಾ ಲಕ್ಷ್ಮಣ, ಮೆಟ್ಟ ಯೆರ್ರಯ್ಯ, ಬೊಡ್ಡೆಪಲ್ಲಿ ದಮಯಂತಿ ಮತ್ತು ವಿ. ಪಾರ್ವತಿ ಎಂಬವರನ್ನು ಕೂಡ ಮುಗಿಸಿದ್ದಾನೆ.
ತನ್ನ ಕೃತ್ಯಕ್ಕಾಗಿ ಆರೋಪಿ ಕತ್ತಿ, ಚಾಕು, ಕುಡುಗೋಲು ಮತ್ತು ನಾಡ ಬಾಂಬ್ ಬಳಸಿದ್ದಾನೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಗ್ರಾಮದ ಪ್ರತಿಯೊಬ್ಬರನ್ನೂ ಕೊಂದು ಹಾಕುತ್ತೇನೆ ಎಂದು ಶಂಕರ ರಾವ್ ಅಬ್ಬರಿಸುತ್ತಿದ್ದ. ರಾತೋರಾತ್ರಿ ಈತನ ರೌದ್ರಾವತಾರವನ್ನು ಕಂಡು ಬೆಚ್ಚಿದ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಪರಾರಿಯಾಗಿದ್ದರು.
ಏಳು ಮಂದಿಯನ್ನು ಕೊಂದು ಹಾಕಿದ ನಂತರ ಆರೋಪಿ ಸ್ಥಳೀಯ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳದಿಂದ ಆರೋಪಿಯೇ ತಯಾರಿಸಿದ್ದ ಹತ್ತಾರು ನಾಡ ಬಾಂಬುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐದು ವರ್ಷಗಳ ಹಿಂದೆ ತನ್ನ ಪತ್ನಿಯನ್ನು ವರದಕ್ಷಿಣೆ ಬೇಡಿಕೆ ಮುಂದಿಟ್ಟು ಕೊಂದು ಹಾಕಿದ್ದ ಶಂಕರ್ ರಾವ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಆತನ ಮಕ್ಕಳೇ ಸಾಕ್ಷ್ಯ ಹೇಳಿದ್ದರು. ಇದಕ್ಕೆ ದನಿಗೂಡಿಸಿದ್ದು ಕೊಲೆಯನ್ನು ಕಣ್ಣಾರೆ ಕಂಡಿದ್ದ ಪಕ್ಕದ ಮನೆಯವರು. ಇದರಿಂದಾಗಿ ಶಂಕರ್ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ಇದೇ ಕಾರಣದಿಂದ ಆತ ಸಿಆರ್‌ಪಿಎಫ್‌ನಿಂದ ವಜಾಗೊಂಡಿದ್ದ.