ಶಬ್ಧವನ್ನೂ ಮೀರಿಸುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಬಾಲಸೋರ್, ಗುರುವಾರ, 2 ಡಿಸೆಂಬರ್ 2010( 14:26 IST )
ಶಬ್ಧದ ವೇಗದ ದುಪ್ಪಟ್ಟು ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಒರಿಸ್ಸಾ ಕರಾವಳಿಯ ಚಾಂದಿಪುರ್ ಏಕೀಕೃತ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
ನಿರ್ದಿಷ್ಟ ಗುರಿಯನ್ನು ಛೇದಿಸುವ ವಿಶಿಷ್ಟತೆಯನ್ನು ಹೊಂದಿರುವ ಈ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಮೂರನೇ ಕ್ಷಿಪಣಿ ವಾಹಕದಿಂದ ಉಡಾವಣೆ ಮಾಡಲಾಯಿತು. ಈ ಪರೀಕ್ಷಾರ್ಥ ಪ್ರಯೋಗವು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
PTI
3000 ಕೆ.ಜಿ. ತೂಕ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿ 8.4 ಮೀಟರ್ ಉದ್ದ ಹಾಗೂ 0.6 ಮೀಟರ್ ವ್ಯಾಸವನ್ನು ಹೊಂದಿದೆ. 300 ಕೆ.ಜಿ. ಯುದ್ಧ ಸಾಮಗ್ರಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಇದು ಹೊಂದಿದೆ.
ಶಬ್ಧಕ್ಕಿಂತ 2.8ರಿಂದ 3 ಪಟ್ಟಿನಷ್ಟು ವೇಗದಲ್ಲಿ 290 ಕಿಲೋ ಮೀಟರ್ ದೂರ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು 2006ರಲ್ಲೇ ಭಾರತದ ಮಿಲಿಟರಿ ಮತ್ತು ನೌಕಾ ಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿದ್ದ ಕ್ಷಿಪಣಿಯಿದು.
ಹಡಗು, ವಿಮಾನ ವಾಹಕ ಹಡಗು, ಜಲಾಂತರ್ಗಾಮಿ ನೌಕೆ ಹಾಗೂ ಭೂಮಿಯಲ್ಲಿನ ಮೊಬೈಲ್ ಲಾಂಚರುಗಳಿಂದ ಈ ಕ್ಷಿಪಣಿಯನ್ನು ಉಡಾಯಿಸಬಹುದಾಗಿದೆ. ನೆಲದಿಂದ 10 ಮೀಟರಿಗೂ ಕಡಿಮೆ ಎತ್ತರದಲ್ಲಿ ಭೂಮಿಯಲ್ಲಿನ ಗುರಿಯನ್ನು ನಿಖರವಾಗಿ ಮುಟ್ಟುವುದು ಇದರ ವಿಶೇಷತೆ.
ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಹಿನ್ನೆಲೆಯಲ್ಲಿ ಬಾಲಸೋರ್ ಜಿಲ್ಲೆಯ 401 ಕುಟುಂಬಗಳಿಗೆ ಸೇರಿದ 3,220 ಮಂದಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲು ಜಿಲ್ಲಾಡಳಿತವು ವ್ಯವಸ್ಥೆ ಮಾಡಿತ್ತು. ಪರೀಕ್ಷಾರ್ಥ ಉಡಾವಣೆ ಸಂದರ್ಭದಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಈ ಮುನ್ನೆಚ್ಚೆರಿಕೆ ಕ್ರಮವನ್ನು ಸೇನೆ ತೆಗೆದುಕೊಂಡಿತ್ತು.
290 ಕಿಲೋ ಮೀಟರ್ ಗುರಿಯನ್ನು ಚಾಚೂ ತಪ್ಪದೆ ನಿಖರವಾಗಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಸೇನೆಯು ಕಳೆದ ಕೆಲವು ವರ್ಷಗಳಿಂದ ಬಳಕೆ ಮಾಡುತ್ತಾ ಬಂದಿದೆ. ಎಲ್ಲಾ ವಿಭಾಗಗಳೂ ಸೇರಿದಂತೆ ಸೇನೆಯ ಒಟ್ಟಾರೆ ಇಂತಹ 67 ಕ್ಷಿಪಣಿಗಳನ್ನು ಹೊಂದಿದೆ. ಐದು ಸ್ವಯಂಚಾಲಿತ ವಾಹಕಗಳೂ ಇವೆ ಎಂದು ಸೇನೆ ತಿಳಿಸಿದೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಮೊತ್ತ ಮೊದಲು ಪರೀಕ್ಷಾರ್ಥ ಪ್ರಯೋಗ ಮಾಡಿದ್ದು 2001ರ ಜೂನ್ 12ರಂದು. ಕೊನೆಯ ಬಾರಿ ಇದೇ ವರ್ಷದ ಸೆಪ್ಟೆಂಬರ್ ಐದರಂದು ಮಾಡಲಾಗಿತ್ತು. ಇವೆಲ್ಲವೂ ನಡೆದಿರುವುದು ಒರಿಸ್ಸಾದಲ್ಲೇ ಎನ್ನುವುದು ವಿಶೇಷ.