ಲೇಖಕಿ ಆರುಂಧತಿ ರಾಯ್ ಕಾಶ್ಮೀರ ವಿವಾದಗಳಲ್ಲಿ ಮುಳುಗೇಳುತ್ತಿರುವ ಹೊತ್ತಿನಲ್ಲಿ ಅವರ ಪತಿ ಹಾಗೂ ಚಿತ್ರ ನಿರ್ದೇಶಕ ಪ್ರದೀಪ್ ಕಿಶನ್ ಕೂಡ ಹಿನ್ನಡೆ ಅನುಭವಿಸಿದ್ದಾರೆ. ಅವರು ಮಧ್ಯಪ್ರದೇಶದಲ್ಲಿ ಹೊಂದಿರುವ ಬಂಗಲೆ ಅಕ್ರಮ ಎಂದು ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿದೆ.
ಪಚಮಾರ್ಹಿ ಗುಡ್ಡ ಪ್ರದೇಶದ ಬರಿಯಂ ಗ್ರಾಮದಲ್ಲಿ ಬಂಗಲೆ ಹೊಂದಿರುವುದು ಅಕ್ರಮ ಎಂದಿರುವ ಇಲ್ಲಿನ ಸ್ಥಳೀಯ ಎಸ್‌ಡಿಎಂ ನ್ಯಾಯಾಲಯ, ಈ ಸಂಬಂಧ ರೆವಿನ್ಯೂ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಜತೆಗೆ ಇದೇ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ಇತರ ಮೂವರ ಅರ್ಜಿಗಳನ್ನು ಕೂಡ ಉಪ ವಿಭಾಗೀಯ ನ್ಯಾಯಾಧೀಶ ವಿ. ಕಿರಣ್ ಗೋಪಾಲ್ ತಿರಸ್ಕರಿಸಿದ್ದಾರೆ.
ಪ್ರಸ್ತುತ ನಿವೇಶನ ಇರುವ ಸ್ಥಳ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಮಾರಾಟ ಮತ್ತು ಖರೀದಿಗೆ ಅವಕಾಶವಿಲ್ಲ ಎಂಬ ಕಿರಿಯ ಕಂದಾಯ ಅಧಿಕಾರಿಗಳ ವರದಿಯನ್ನಾದರಿಸಿ, ಜಿಲ್ಲಾ ಉಪ ಕಂದಾಯ ಅಧಿಕಾರಿ 2003ರಲ್ಲೇ ಇವರ ಭೂ ಒಡೆತನದ ಹಕ್ಕನ್ನು ರದ್ದುಗೊಳಿಸಿದ್ದರು. ಇದರ ಪರಿಶೀಲನೆಗೆ ಕಿಶನ್ ಹಾಗೂ ಇತರ ಮೂವರು ಅರ್ಜಿದಾರರು ಮಧ್ಯಪ್ರದೇಶದ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಮಧ್ಯಪ್ರದೇಶದ ಹೈಕೋರ್ಟ್, ಎಸ್‌ಡಿಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಈ ನಿಮಿತ್ತ ಕಳೆದ ಫೆಬ್ರವರಿಯಲ್ಲಿ ಕಿಶನ್ ಸೇರಿದಂತೆ ಆರಾಧನಾ ಸೇಠ್, ಜಗದೀಶ್ ಚಂದ್ ಮತ್ತು ಎನ್. ಯಾಧವ್ ಅರ್ಜಿ ಸಲ್ಲಿಸಿದ್ದರು.
1993ರಲ್ಲಿ ಬರಿಯಂ ಗ್ರಾಮದಲ್ಲಿ ಆಸ್ತಿ ಖರೀದಿಸಿದ್ದು, ಎಲ್ಲಾ ಅನುಮೋದನೆಗಳು ಪೂರ್ಣಗೊಂಡ ನಂತರ 1995ರಲ್ಲಿ ನಿವೇಶನ ನಿರ್ಮಿಸಿದ್ದೇವೆ. ಕಂದಾಯ ಇಲಾಖೆಯ ನಿಯಮಾನುಸಾರ ಮನೆ ಕಟ್ಟಿಕೊಂಡಿದ್ದು ಯಾವುದೇ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಗೋಯಲ್, ಆದೇಶವನ್ನು ಪ್ರಶ್ನಿಸಿ ಹೊಶಾಂಗಬಾದ್‌ನ ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.