ಭ್ರಷ್ಟಾಚಾರ ಕುರಿತು ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ: ಪ್ರಣಬ್
ನವದೆಹಲಿ, ಶುಕ್ರವಾರ, 3 ಡಿಸೆಂಬರ್ 2010( 17:11 IST )
ಬಿಜೆಪಿಯ ಅಧ್ಯಕ್ಷರೇ ಲಂಚ ಪಡೆದುಕೊಂಡಿರುವುದು ಈ ಹಿಂದೆ ಟೆಹೆಲ್ಕಾ ಅಣಕು ಕಾರ್ಯಾಚರಣೆಯ ಕ್ಯಾಮರಾದಲ್ಲಿ ಬಹಿರಂಗವಾಗಿತ್ತು. ಇಂತಹ ಪಕ್ಷವು ಇಂದು ಭ್ರಷ್ಟಾಚಾರದ ಕುರಿತು ಮಾತನಾಡುತ್ತಿದೆ. ಕೇಸರಿ ಪಕ್ಷಕ್ಕೆ ಈ ವಿಚಾರದ ಕುರಿತು ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದು 2ಜಿ ಹಗರಣದ ಸಂಬಂಧ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಕ್ಕೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ಚಾಟಿ ಬೀಸಿದ್ದಾರೆ.
ಈ ಹಿಂದೆ ಆಡಳಿತದಲ್ಲಿದ್ದಾಗ ಏನು ನಡೆದಿತ್ತು, ಟೆಹೆಲ್ಕಾ ಟೇಪ್ ಬಹಿರಂಗವಾದಾಗ ಏನಾಗಿತ್ತು ಎಂಬ ವಿಚಾರಗಳನ್ನು ಜನತೆ ಮರೆಯಬಾರದು. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ ಹೇಗೆ ಲಂಚಕ್ಕಾಗಿ ಕೈಯೊಡ್ಡಿದ್ದರು ಎಂಬುದು ಬಯಲಾಗಿತ್ತು. ಈಗ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಂಸತ್ತಿನ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಡಿಎ ಅಧಿಕಾರವಧಿಯಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಪಡೆದುಕೊಳ್ಳುತ್ತಿರುವುದು ಟೆಹೆಲ್ಕಾ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೇ ವಿಚಾರವನ್ನು ಇಂದು ಪ್ರಣಬ್ ನೆನಪಿಸಿದರು.
2ಜಿ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ನವೆಂಬರ್ 10ರಿಂದ ಸತತ 15 ಕಲಾಪದ ದಿನಗಳಲ್ಲಿ ಸಂಸತ್ ಅಧಿವೇಶನ ನಡೆಯಲು ಬಿಡದ ಬಿಜೆಪಿ ನೇತೃತ್ವದ ಎನ್‌ಡಿಎ, ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಾ ಬಂದಿವೆ.
ಅದೇ ಹೊತ್ತಿಗೆ ಪ್ರಣಬ್ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು. 2ಜಿ ಹಗರಣದ ಕುರಿತು ಮಾಧ್ಯಮಗಳು ಸಾರ್ವಜನಿಕರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.
ಬಂಗಾರು ಲಕ್ಷ್ಮಣ್ ಪ್ರಕರಣವನ್ನು ಉಲ್ಲೇಖಿಸುವ ಮೂಲಕ ಪ್ರಣಬ್ ಜೆಪಿಸಿ ಬೇಡಿಕೆಯ ಗಮನವನ್ನು ಬೇರೆಡೆಗೆ ಸೆಳೆಯಲು ಸರಕಾರ ಯತ್ನಿಸುತ್ತಿದೆ ಎಂದು ಆರೋಪಗಳಿಗೆ ಬಿಜೆಪಿ ಪ್ರತಿಕ್ರಿಯಿಸಿದೆ.
ನಾವು ಪ್ರಸಕ್ತ ವಿಚಾರದಿಂದ ಯಾವುದೇ ಕಾರಣಕ್ಕೂ ವಿಮುಖರಾಗಬಾರದು. ಆದರೆ ಕಾಂಗ್ರೆಸ್ ಆ ಕೆಲಸವನ್ನು ಮಾಡುತ್ತಿದೆ. ಜೆಪಿಸಿ ತನಿಖೆ ಯಾಕೆ ನಡೆಯಬೇಕು ಎಂಬ ಬಗ್ಗೆ ನಮ್ಮ ನಾಯಕ ಎಲ್.ಕೆ. ಅಡ್ವಾಣಿಯವರು ನಿನ್ನೆ ವಿವರಣೆ ನೀಡಿದ್ದಾರೆ. ಸರಕಾರ ನಡೆಸುತ್ತಿರುವ ಈ ಯತ್ನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ತಿಳಿಸಿದ್ದಾರೆ.