ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೋಯ್ಡಾ ಪಾರ್ಕಿಗೆ ಸುಪ್ರೀಂ ಅಸ್ತು; ಮಾಯಾವತಿಗೆ ಜಯ (Supreme Court | Uttar Pradesh | Noida park | Mayawati)
Bookmark and Share Feedback Print
 
ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಮಹತ್ವದ ಮುನ್ನಡೆ ಪಡೆದುಕೊಂಡಿದ್ದಾರೆ. ನೋಯ್ಡಾದಲ್ಲಿನ ಡಾ. ಭೀಮಾ ರಾವ್ ಅಂಬೇಡ್ಕರ್ ಉದ್ಯಾನವನ ನಿರ್ಮಾಣಕ್ಕೆ ಸರ್ವೋಚ್ಚ ನ್ಯಾಯಾಲಯವು ಅಸ್ತು ಎಂದಿದೆ.

ಆದರೆ ಪಾರ್ಕ್ ನಿರ್ಮಾಣದ ಸಂಬಂಧ ಸುಪ್ರೀಂ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಒಟ್ಟಾರೆ ಪಾರ್ಕ್ ಪ್ರದೇಶದ ಶೇ.25ಕ್ಕೂ ಹೆಚ್ಚು ಪ್ರದೇಶದಲ್ಲಿ ಶಾಶ್ವತ ರಚನೆ ಮಾಡಬಾರದು ಎನ್ನುವುದು ಅದರಲ್ಲಿ ಮಹತ್ವವಾದುದು. ಓಕ್ಲಾ ಪಕ್ಷಿಧಾಮಕ್ಕೆ ಈ ಪಾರ್ಕ್ ಹತ್ತಿರದಲ್ಲಿರುವುದರಿಂದ ನ್ಯಾಯಾಲಯವು ಇಂತಹ ನಿಬಂಧನೆ ವಿಧಿಸಿದೆ.

ಪಾರ್ಕ್ ನಿರ್ಮಾಣದ ಸಂಬಂಧ ಮೇಲ್ವಿಚಾರಣೆ ನಡೆಸಲು ನ್ಯಾಯಾಲಯವು ಮೂರು ಸದಸ್ಯರ ಸಮಿತಿಯೊಂದನ್ನು ಕೂಡ ರಚಿಸಿದೆ. ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವಂತೆ ಈ ಸಮಿತಿಯು ನೋಡಿಕೊಳ್ಳಲಿದೆ.

ಹಲವು ದಲಿತ ನಾಯಕ ಪುತ್ಥಳಿಗಳನ್ನು ಸ್ಥಾಪಿಸಲಾಗುತ್ತಿರುವ ಈ ಪಾರ್ಕ್ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ತಡೆಯಾಜ್ಞೆ ವಿಧಿಸಲಾಗಿತ್ತು. ಪ್ರಕರಣ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟಿಗೆ ಹೋಗಿ ಹಲವು ಸಮಯವೇ ಕಳೆದಿದ್ದರೂ, ಪರಿಹಾರ ಕಂಡಿರಲಿಲ್ಲ. ಈಗ ಕೊನೆಗೂ ಮಾಯಾವತಿ ಸರಕಾರ ಗೆಲುವಿನ ನಗೆ ಬೀರಿದೆ.

ಈ ಹಿಂದೆ ಪರಿಸರ ಸಚಿವಾಲಯವು ಪಾರ್ಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಪಾರ್ಕ್ ಪ್ರದೇಶವು ಅರಣ್ಯ ಪ್ರದೇಶದಲ್ಲಿ ಇರದೇ ಇರುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಕೃಷ್ಣನ್ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.

ದಲಿತ ನಾಯಕರ ಪುತ್ಥಳಿಗಳನ್ನು ನಿರ್ಮಿಸುವ ಮೂಲಕ ಮಾಯಾವತಿಯವರು ಅಭಿವೃದ್ಧಿಯನ್ನು ಬದಿಗೊತ್ತಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಕೊನೆಗೂ ಪ್ರಕರಣದಲ್ಲಿ ಮಾಯಾವತಿ ಅಂದುಕೊಂಡದ್ದನ್ನು ಸಾಧಿಸುವ ನಿಟ್ಟಿನಲ್ಲಿ ಹಸಿರು ನಿಶಾನೆ ಪಡೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ