ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇನೂ ಮಾಡ್ಲಿಲ್ಲ, ಎಲ್ಲಾ ಕಟ್ಟುಕಥೆ: ಪಾತಕಿ ಕಸಬ್ (Pakistani terrorist | Ajmal Kasab | Mumbai attacks | India)
Bookmark and Share Feedback Print
 
ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ನಡೆಸಿದ ದಾಳಿಯನ್ನು ನಿರಾಕರಿಸಿರುವ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್, ಪೊಲೀಸರು ಕಟ್ಟಿರುವ ಕಥೆಯ ಬಲಿಪಶು ತಾನೆಂದು ಬಾಂಬೆ ಹೈಕೋರ್ಟಿಗೆ ಶುಕ್ರವಾರ ಹೇಳಿದ್ದಾನೆ.

ಪ್ರಾಸಿಕ್ಯೂಷನ್ ವಾದದಲ್ಲಿನ ಲೋಪಗಳನ್ನು ಎತ್ತಿಕೊಂಡು, ಸಾಕ್ಷಿಗಳ ಹೇಳಿಕೆಗಳಲ್ಲಿನ ವೈರುಧ್ಯತೆಗಳತ್ತ ಬೆಟ್ಟು ಮಾಡುತ್ತಾ ಪ್ರತಿವಾದಿ ವಕೀಲರಾದ ಅಮೀನ್ ಸೋಲ್ಕರ್, ಫರ್ಹಾನಾ ಶಾ ಮತ್ತು ಸಂತೋಷ್ ದೇಶಪಾಂಡೆಯವರು, ದಾಳಿಯ ಸಂದರ್ಭದಲ್ಲಿ ಕಸಬ್ ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಇರಲಿಲ್ಲ ಎಂದು ವಾದಿಸಿದರು.
PTI

ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಘಟನೆಯನ್ನು ನಾವು ನಿರಾಕರಿಸುವುದಿಲ್ಲ. ಅಲ್ಲಿ ಇಬ್ಬರು ಭಯೋತ್ಪಾದಕರು ಜನರತ್ತ ಗುಂಡು ಹಾರಿಸಿದ್ದೂ ಸುಳ್ಳೆಂದು ಹೇಳುತ್ತಿಲ್ಲ. ಆದರೆ ಆ ನಿರ್ದಿಷ್ಟ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಕಸಬ್ ಇರಲಿಲ್ಲ ಎಂದಷ್ಟೇ ನಾವು ಹೇಳುತ್ತಿದ್ದೇವೆ ಎಂದು ಕಸಬ್ ಪರ ವಕೀಲರು ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರಿಗೆ ಮನದಟ್ಟು ಮಾಡಲು ಯತ್ನಿಸಿದರು.

ಮುಂಬೈ ದಾಳಿ ಸಂಬಂಧ ವಿಶೇಷ ನ್ಯಾಯಾಲಯವು ಕಸಬ್‌ಗೆ ಮರಣ ದಂಡನೆ ವಿಧಿಸಿರುವುದನ್ನು ಖಾಯಂಗೊಳಿಸುವ ವಿಚಾರಣೆ ಪ್ರಸಕ್ತ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಪ್ರಾಸಿಕ್ಯೂಷನ್ ತನ್ನ ವಾದವನ್ನು ಮುಗಿಸಿತ್ತು. ಈಗ ಪ್ರತಿವಾದಿಗಳ ಪರ ವಿಚಾರಣೆ ನಡೆಯುತ್ತಿದೆ.

ಪ್ರಾಸಿಕ್ಯೂಷನ್ ಕಸಬ್ ವಿರುದ್ಧ ಹೇಳಿಸಿರುವ ಸಾಕ್ಷ್ಯಗಳನ್ನು ನಂಬುವ ಮೊದಲು ನ್ಯಾಯಮೂರ್ತಿಗಳು ಘಟನೆ ನಡೆದಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆಗ ಆ ಜಾಗದ ಸ್ವರೂಪದ ಅರಿವು ತಮಗಾಗುತ್ತದೆ ಎಂದು ಸೋಲ್ಕರ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಕಸಬ್ ಪರ ವಕೀಲರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನ್ಯಾಯಮೂರ್ತಿಗಳು, ತಾವು ಸ್ಥಳಕ್ಕೆ ಭೇಟಿ ನೀಡುತ್ತೇವೆ. ಮುಂದಿನ ವಾರದಲ್ಲಿ ಒಂದು ದಿನ ಅದಕ್ಕಾಗಿ ಮೀಸಲಿಡುತ್ತೇವೆ. ಈ ಸಂಬಂಧ ಶೀಘ್ರದಲ್ಲೇ ನಿರ್ಧಾರಕ್ಕೆ ಬರುತ್ತೇವೆ ಎಂದರು.

ಕಸಬ್‌ಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದ್ದ ಸೆಷನ್ಸ್ ಜಡ್ಜ್ ಎಂ.ಎಲ್. ತಹಲಿಯಾನಿಯವರು ವಿಚಾರಣೆಗೂ ಮೊದಲು ಉಗ್ರರು ಅಟ್ಟಹಾಸಗೈದಿದ್ದ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ-ಗತಿಯನ್ನು ಪರಿಶೀಲನೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ