ಪಾಕಿಸ್ತಾನ ಅಂದ್ರೆ ಸುಮ್ನೆ ಅಂದ್ಕೊಂಡ್ರಾ? ಅವರು ಮಾಡೋ ಕಿತಾಪತಿಗಳು ಒಂದೇ ಎರಡೇ? ಭಾರತದ ಮೇಲೆ ಮೊದಲಿನಿಂದಲೂ ಒಂದು ಕಣ್ಣಿಟ್ಟುಕೊಂಡೇ ಬಂದಿರುವ ಪಾಕಿಗಳು ಈಗ ಮಾಡಿರುವ ಕೆಲಸವನ್ನೇ ನೋಡಿ. ಅತಿರಥ ಮಹಾರಥರನ್ನು ತನ್ನ ಬಲೆಗೆ ಕೆಡಹುವ ಸಾಮರ್ಥ್ಯವನ್ನು ಹೊಂದಿರುವ ಸಿಬಿಐ ಅಂತರ್ಜಾಲ ತಾಣಕ್ಕೆ ಕನ್ನ ಹಾಕಿದ್ದಾರೆ.
PR
ಕೇವಲ ಸಿಬಿಐ ವೆಬ್‌ಸೈಟ್ ಮಾತ್ರವಲ್ಲ, ಒಟ್ಟು 270 ಭಾರತೀಯ ವೆಬ್‌ಸೈಟುಗಳನ್ನು ಹ್ಯಾಕ್ ಮಾಡಲಾಗಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಸಿಬಿಐ ಕ್ರಮಕ್ಕೆ ಮುಂದಾಗಿದೆ. ತನಿಖೆಗೆ ಆದೇಶ ನೀಡಿದೆ.
'ಪಾಕಿಸ್ತಾನಿ ಸೈಬರ್ ಆರ್ಮಿ' ಹೆಸರಿನಲ್ಲಿ ಈ ಕುಕೃತ್ಯವನ್ನು ಮಾಡಲಾಗಿದೆ. 'ಇಂಡಿಯನ್ ಸೈಬರ್ ಆರ್ಮಿ'ಯು ಪಾಕಿಸ್ತಾನದ ವೆಬ್‌ಸೈಟುಗಳಿಗೆ ಕನ್ನ ಹಾಕಬಾರದು ಎಂಬ ಎಚ್ಚರಿಕೆಯನ್ನೂ ಸಿಬಿಐ ವೆಬ್‌ಸೈಟಿನಲ್ಲಿ ಪಾಕಿಗಳು ಪೋಸ್ಟ್ ಮಾಡಿದ್ದಾರೆ.
ದೇಶದ ಅತಿ ಸುರಕ್ಷಿತ ವೆಬ್‌ಸೈಟುಗಳಲ್ಲಿ ಒಂದು ಎಂದು ಹೇಳಲಾಗುತ್ತಿದ್ದ ಸಿಬಿಐ ವೆಬ್‌ಸೈಟಿಗೆ ಪಾಕಿಸ್ತಾನಿಗಳು ದಾಳಿ ಮಾಡುವುದರೊಂದಿಗೆ ತನಿಖಾ ಸಂಸ್ಥೆಯು ತೀವ್ರ ಮುಖಭಂಗಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅಂತಾರಾಷ್ಟ್ರೀಯ ಪೊಲೀಸರನ್ನು (ಇಂಟರ್ ಪೋಲ್) ಸಂಪರ್ಕಿಸಿದೆ. ಕಠಿಣ ಕ್ರಮ ಕೈಗೊಳ್ಳಲು ಸೂಕ್ತ ದಾರಿಗಳನ್ನು ಹುಡುಕುತ್ತಿದೆ.
ಈ ದಾಳಿ ನಡೆದಿರುವುದು ಶುಕ್ರವಾರ ರಾತ್ರಿ. ಅದರ ಬಳಿಕ ಇದುವರೆಗೂ ವೆಬ್‌ಸೈಟ್ ಕೆಲಸ ಮಾಡುತ್ತಿಲ್ಲ. ಆರಂಭದಲ್ಲಿ ಪಾಕಿಸ್ತಾನದ ಸೈಬರ್ ಸೇನೆಯ ಅಟ್ಟಹಾಸಗಳನ್ನೊಳಗೊಂಡ ವಾಕ್ಯಗಳು ವೆಬ್‌ಸೈಟಿನಲ್ಲಿ ರಾರಾಜಿಸುತ್ತಿತ್ತು. ಆದರೆ ಈಗ ವೆಬ್‌ಸೈಟ್ ಓಪನ್ ಆಗುತ್ತಿಲ್ಲ.
'ಭಾರತೀಯ ಸೈಬರ್ ಸೇನೆಯು ಪಾಕಿಸ್ತಾನದ ತಾಣಗಳನ್ನು ಗುರಿಯಾಗಿಟ್ಟುಕೊಂಡಿರುವುದಕ್ಕೆ ಯತ್ನಿಸಲಾದ ಪ್ರತಿಕ್ರಿಯೆಯಿದು. ನಾವು ಮಲಗಿದ್ದೇವೆ, ಆದರೆ ಸತ್ತಿಲ್ಲ. ಇದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಇನ್ನಷ್ಟು ವೆಬ್‌ಸೈಟುಗಳನ್ನು ಹೀಗೆ ಮಲಗಿಸುತ್ತೇವೆ. ನಿಮ್ಮ ಸಿಬಿಐ ಏನು ಮಾಡುತ್ತದೋ ನೋಡೇ ಬಿಡುತ್ತೇವೆ' ಎಂದೆಲ್ಲಾ ಪಾಕಿಗಳು ಸಿಬಿಐ ತಾಣದಲ್ಲಿ ಬರೆದು ಹೋಗಿದ್ದಾರೆ.
ಕೊನೆಗೆ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನು ಬರೆಯಲಾಗಿದೆ.