ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ವಿಚಾರಣೆಗೆ ಮೊದಲು ಸಿವಿಸಿ ಥಾಮಸ್ ನಿರ್ಗಮನ? (CVC | PJ Thomas | Supreme Court | 2G spectrum scam)
Bookmark and Share Feedback Print
 
ಕೇಂದ್ರ ಜಾಗೃತದಳದ ಆಯುಕ್ತ ಪಿ.ಜೆ. ಥಾಮಸ್ ವಿವಾದಿತ ನೇಮಕಾತಿ ಕುರಿತು ಸೋಮವಾರ ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ನಡೆಸುವ ಮೊದಲೇ ಅವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಯ ಮೇಲ್ವಿಚಾರಣೆ ನಡೆಸಲು ಕ್ರಿಮಿನಲ್ ಪ್ರಕರಣದಲ್ಲಿ ಥಳಕು ಹಾಕಿಕೊಂಡಿರುವ ಥಾಮಸ್ ಎಷ್ಟು ಸಮರ್ಥರು ಎಂದು ಸುಪ್ರೀಂ ಕೋರ್ಟ್ ಶಂಕೆ ವ್ಯಕ್ತಪಡಿಸಿತ್ತು. ಇದರ ಬಳಿಕ ಥಾಮಸ್ ತನ್ನ ಕಚೇರಿಯತ್ತ ಸುಳಿದಿಲ್ಲ.
PTI

2ಜಿ ಹಗರಣದ ಸಂಬಂಧ ಸಿಬಿಐ ಮೇಲುಸ್ತುವಾರಿಯನ್ನು ಥಾಮಸ್ ವಹಿಸುವುದಿಲ್ಲ ಎಂದು ಸರಕಾರವು ಕಳೆದ ವಿಚಾರಣೆಯಲ್ಲಿ ಸಿವಿಸಿ ಪರ ಬ್ಯಾಟಿಂಗ್ ನಡೆಸಿದ್ದರೂ, ಕೋರ್ಟ್ ಸಮಾಧಾನಗೊಂಡಿಲ್ಲ. ಹಾಗಾಗಿ ಮೂಲಗಳ ಪ್ರಕಾರ ಥಾಮಸ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಆದರೆ ಅದು ಯಾವಾಗ ಎನ್ನುವುದು ಮಾತ್ರ ಬಾಕಿ ಉಳಿದಿರುವ ಪ್ರಶ್ನೆ. ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರಿಗೆ ಶೀಘ್ರದಲ್ಲೇ ರಾಜೀನಾಮೆ ರವಾನೆಯಾಗಬಹುದು ಎಂದು ಹೇಳಲಾಗುತ್ತಿದೆ.

ತನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ, ನನ್ನ ಆತ್ಮಸಾಕ್ಷಿ ಪರಿಶುದ್ಧವಾಗಿದೆ ಎಂದು ಸಿವಿವಿ ಥಾಮಸ್ ಹೇಳುತ್ತಾ ಬಂದಿದ್ದಾರೆ. ನನ್ನ ರಾಜೀನಾಮೆ ಯಾರೂ ಕೇಳಿಲ್ಲ. ಹಾಗಾಗಿ ರಾಜೀನಾಮೆ ನೀಡುವ ಪ್ರಸ್ತಾಪ ನನ್ನ ಮುಂದಿಲ್ಲ ಎಂದೂ ಹೇಳುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟಿನಲ್ಲಿ ಕೇಂದ್ರವು ಸತತ ಮುಖಭಂಗ ಎದುರಿಸುತ್ತಿರುವುದರಿಂದ ಪಾರಾಗುವ ನಿಟ್ಟಿನಲ್ಲಿ ಥಾಮಸ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ.

1991ರಲ್ಲಿ ಕೇರಳದಲ್ಲಿದ್ದ ಸಂದರ್ಭದಲ್ಲಿ ಪಾಮೊಲಿನ್ ಆಮದು ಹಗರಣದಲ್ಲಿ ಥಾಮಸ್ ಹೆಸರು ಆರೋಪಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ನಂತರ 2ಜಿ ಹಗರಣ ನಡೆದ 2008ರಲ್ಲಿ ದೂರಸಂಪರ್ಕ ಇಲಾಖೆ ಕಾರ್ಯದರ್ಶಿಯಾಗಿದ್ದ ಹೊತ್ತಿನಲ್ಲೂ ಇವರ ಕೈವಾಡವಿತ್ತು ಎಂಬ ಆರೋಪಗಳಿವೆ. ಇಂತಹ ವ್ಯಕ್ತಿಯನ್ನು ತನಿಖಾ ಸಂಸ್ಥೆಯೊಂದರ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಕ್ರಮ ಎಷ್ಟು ಸರಿ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ತೀವ್ರವಾಗಿ ಆಕ್ಷೇಪಿಸಿದ್ದರೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ತ್ರಿಸದಸ್ಯ ಸಮಿತಿಯು ಸಿವಿಸಿ ಹುದ್ದೆಗೆ 60ರ ಹರೆಯದ ಥಾಮಸ್ ಅವರನ್ನೇ ನೇಮಕ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ