ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ ಸಂತ್ರಸ್ತರ ಪರಿಹಾರ ಹೆಚ್ಚಿಸಿ: ಸುಪ್ರೀಂಗೆ ಕೇಂದ್ರ
(Bhopal gas victims | Supreme Court | Union Carbide | India)
ಅಮೆರಿಕಾದ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ವಿಷಾನಿಲ ಸೋರಿಕೆಯಾಗಿ ಸಂಭವಿಸಿದ ಭೋಪಾಲ ಅನಿಲ ದುರಂತದಲ್ಲಿ 5,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಈ ಸಂಬಂಧ ನೀಡಲಾಗಿರುವ 750 ಕೋಟಿ ರೂಪಾಯಿಗಳ ಪರಿಹಾರವನ್ನು 7,700 ಕೋಟಿ ರೂ.ಗಳಿಗೆ ಏರಿಸಬೇಕು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.
1989ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ 750 ಕೋಟಿ ರೂಪಾಯಿ ಪರಿಹಾರ ಮತ್ತು ಆ ಬಳಿಕ ಫೆಬ್ರವರಿ 15 ಮತ್ತು ಮೇ 4ರಂದು ಪರಿಹಾರ ಹಂಚಿಕೆ ಕುರಿತ ತೀರ್ಪನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಭೋಪಾಲ ದುರಂತಕ್ಕೆ 26 ವರ್ಷ ತುಂಬಿದ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಮನವಿ ಮಾಡಿಕೊಂಡಿದೆ.
ತೀರ್ಪನ್ನು ಮರು ಪರಿಶೀಲನೆ ನಡೆಸಬೇಕು ಎಂಬು ಮನವಿಯನ್ನು ಈ ಹಿಂದೆ 1991ರ ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದುದನ್ನು ಈಗ ಸ್ಮರಿಸಬಹುದಾಗಿದೆ.
ಈ ಪುನರ್ ಪರಿಶೀಲನಾ ಅರ್ಜಿಯನ್ನು ದಾಖಲಿಸಿದ್ದು ಅಟಾರ್ನಿ ಜನರಲ್ ಜಿ.ಇ. ವಹನ್ವತಿ. ನ್ಯಾಯಾಲಯವು ತೀರ್ಪು ನೀಡುವ ಸಂದರ್ಭದಲ್ಲಿ ವಾಸ್ತವ ಸ್ಥಿತಿ ಮತ್ತು ವರದಿಗಳನ್ನು ಅರ್ಥೈಸಿಕೊಳ್ಳುವಲ್ಲಿ ಸಮರ್ಥವಾಗಿಲ್ಲ. ಅಂದು ಪ್ರಕಟಿಸಲಾಗಿದ್ದ 750 ಕೋಟಿ ರೂಪಾಯಿಗಳ ಪರಿಹಾರ ಯಾವ ಕಾರಣಕ್ಕೂ ಒಪ್ಪಿಕೊಳ್ಳುವಂತದ್ದಲ್ಲ. ಹಾಗಾಗಿ ಇದನ್ನು ಹೆಚ್ಚಿಸುವ ಮನವಿಯನ್ನು ಪರಿಶೀಲನೆಗೆ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ಭೋಪಾಲ್ ಅನಿಲ ದುರಂತವು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿರುವುದರಿಂದ, ನ್ಯಾಯಾಂಗವು ತನ್ನ ತೀರ್ಪುಗಳಲ್ಲಿ ನಡೆದಿರುವ ಪ್ರಮಾದಗಳನ್ನು ಸಾರ್ವಜನಿಕ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಮರು ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕಾದ ಅಗತ್ಯವನ್ನು ಇದೇ ಸಂದರ್ಭದಲ್ಲಿ ಸರಕಾರವು ಒತ್ತಿ ಹೇಳಿದೆ.
ಇಂತಹ ದುರ್ಘಟನೆಗಳಿಗೆ ಕಂಪನಿಗಳೇ ಹೊಣೆಯಾಗಿರುತ್ತವೆ. ಕಂಪನಿಗಳಿಂದ ನಡೆಯುವ ಪ್ರಮಾದಗಳಿಗೆ ತೆರಿಗೆದಾರರ ಹಣವನ್ನು ಪರಿಹಾರ ರೂಪದಲ್ಲಿ ಬಳಸುವುದು ಸಾಧ್ಯವಿಲ್ಲ. ಹಾಗಾಗಿ ಕಂಪನಿಯಿಂದಲೇ ಪರಿಹಾರವನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರ ಕೇಳಿಕೊಂಡಿದೆ.