ಎರಡು ಜೀವ, ಒಂದೇ ಆತ್ಮ ಎಂಬಂತೆ ಬದುಕಬೇಕಾದ ದಂಪತಿಯ ನಡುವೆ ವಿರಸಗಳುಂಟಾದಾಗ ಆಜನ್ಮ ವೈರಿಯನ್ನೂ ಮೀರಿಸುವಂತೆ ತರಿದು ಹಾಕುವುದು ಇತ್ತೀಚಿನ ದಿನಗಳಲ್ಲಿ ಕೇಳುತ್ತಾ-ನೋಡುತ್ತಾ ಬಂದಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಪತ್ನಿಯ ದಿಂಬಿನ ಅಡಿಯಲ್ಲಿ ಸ್ಫೋಟಗಳನ್ನು ಇಟ್ಟು ಹತ್ಯೆ ಮಾಡಿ ಸಾವಿನಲ್ಲೂ ವಿಕೃತಿ ಮೆರೆದಿದ್ದಾನೆ.
ಇದು ನಡೆದಿರುವುದು ಮಿಜೋರಾಂನ ಐಜಾವ್ಲ್ ಜಿಲ್ಲೆಯಲ್ಲಿ. ಬರ್ಮಾ ಪ್ರಜೆ ಎಚ್. ನಂಚುಮಾ ಎಂಬಾತನೇ ಪತ್ನಿಯನ್ನು ಹತ್ಯೆ ಮಾಡಿರುವುದು. 50ರ ಹರೆಯದ ಈತ ತನ್ನ ಪತ್ನಿ ಲೆಂಪಾರಿ (45) ಹಿರಿಯ ಪುತ್ರನ ಮನೆಯಲ್ಲಿ ಮಲಗಿರುವ ಹೊತ್ತಿನಲ್ಲಿ ದಿಂಬಿನ ಅಡಿಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಾಲ್‌ಬಿಯಾತಂಗಾ ಕೈಂತೆ ತಿಳಿಸಿದ್ದಾರೆ.
ತೀವ್ರ ಹಿಂಸೆ ನೀಡುತ್ತಿದ್ದ ಕಾರಣದಿಂದ ಗಂಡನನ್ನು ತೊರೆದಿದ್ದ ಲೆಂಪಾರಿ ಕಳೆದ ಎರಡು ವಾರಗಳಿಂದ ಹಿರಿಯ ಪುತ್ರನ ಜತೆ ವಾಸಿಸುತ್ತಿದ್ದಳು. ಆದರೆ ಅಲ್ಲಿಗೂ ಯಾರಿಗೂ ತಿಳಿಯದಂತೆ ಬಂದಿದ್ದ ಗಂಡ ನಂಚುಮಾ ಸ್ಫೋಟಕ ಇಟ್ಟು ಕೊಂದು ಹಾಕಿದ್ದಾನೆ.
ಘಟನೆಯ ನಂತರ ಗಂಡ ಪರಾರಿಯಾದರೂ, ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಫೋಟದ ಬಳಿಕ ಲೆಂಪಾರಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.